ಉಡುಪಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿ
ಉಡುಪಿ, ಎಪ್ರಿಲ್ 27, 2021: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಾಲ್ ನಂತೆ ಗರಿಷ್ಟ 40 ಕ್ಷಿಂಟಾಲ್ ಭತ್ತವನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹಿಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಭತ್ತ ಸಂಗ್ರಹಣೆಗೆ ಈಗಾಗಲೇ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ತಂತ್ರಾಂಶದಿಂದ ರೈತರ ಮಾಹಿತಿಯನ್ನು ಪಡೆದು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ 0.12 ಲಕ್ಷ ಮೆ. ಟನ್ ಭತ್ತವನ್ನು ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ರೂ. 1868 ರ ದರದಲ್ಲಿ ಹಾಗೂ ಗ್ರೇಡ್ ಎ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ ರೂ. 1888 ರ ದರದಲ್ಲಿ ಹಾಗೂ ಜ್ಯೋತಿ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ ರೂ. 1868 ರ ದರದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ.
ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿಸಲು ಜಿಲ್ಲೆಗೆ ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತರನ್ನು ಸಂಗ್ರಹಣಾ ಏಜೆನ್ಸಿಯನ್ನಾಗಿ ನೇಮಿಸಿದ್ದು, ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಎಪಿಎಂಸಿ ಯಾರ್ಡ್ ನಲ್ಲಿ ಸಂಗ್ರಹಣಾ ಕೇಂದ್ರ ತೆರೆಯಲಾಗಿದೆ.
ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ರೈತರ ನೋಂದಣಿ ಅವಧಿಯನ್ನು ಮೇ 5 ರ ವರೆಗೆ ಹಾಗೂ ರೈತರಿಂದ ಭತ್ತ ಖರೀದಿ ಅವಧಿಯನ್ನು ಜೂನ್ 30 ರ ವರೆಗೆ ನಿಗದಿಪಡಿಸಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.