ಮದುವೆ ಮಂಟಪಗಳಲ್ಲಿ ಕೊರೋನಾ ಮಾರ್ಗಸೂಚಿ ಅನುಸರಿಸದಿದ್ದರೆ ಕಠಿಣ ಕಾನೂನು ಕ್ರಮ : ಸಚಿವ ಸುರೇಶ್ ಕುಮಾರ್

 ಮದುವೆ ಮಂಟಪಗಳಲ್ಲಿ ಕೊರೋನಾ ಮಾರ್ಗಸೂಚಿ ಅನುಸರಿಸದಿದ್ದರೆ ಕಠಿಣ ಕಾನೂನು ಕ್ರಮ : ಸಚಿವ ಸುರೇಶ್ ಕುಮಾರ್
Share this post

ಬೆಂಗಳೂರು, ಏಪ್ರಿಲ್ 18, 2021: ಕೊವೀಡ್ ನಿಯಂತ್ರಣಕ್ಕಾಗಿ ಸರ್ಕಾರ ಮದುವೆ ಮಂಟಪಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದನ್ನು ಮದುವೆ ಮಂಟಪಗಳ ಮಾಲಿಕರು ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಬೊಮ್ಮನಹಳ್ಳಿ ಉಸ್ತುವಾರಿ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಬೆಂಗಳೂರಿನ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಹಾಗೂ ಆನೇಕಲ್ ತಾಲ್ಲೂಕುಗಳಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಮದುವೆ ಮಂಟಪಗಳ ಮಾಲಿಕರು ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಸಚಿವರು ಕೆಲ ಖಾಸಗಿ ಆಸ್ಪತ್ರೆಗಳು ನಿಗದಿತ ಸಂಖ್ಯೆಯ ಬೆಡ್ ಗಳನ್ನು ಕೊರೋನಾ‌ ಸೊಂಕಿತರಿಗಾಗಿ ಮೀಸಲಿಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸಿಡಿಮಿಡಿಗೊಂಡ ಸಚಿವರು ಅಂತಹ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಕಾಯ್ದಿರಿಸಿದ್ದರೂ ಸೊಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಲ್ಲಿ ಅನಗತ್ಯ ವಿಳಂಬ ಉಂಟಾಗುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಪ್ರತಿ ಆಸ್ಪತ್ರೆಗೆ ಸರ್ಕಾರದ ಸಿಬ್ಬಂದಿಯನ್ನು ನಿಯೋಜಿಸಿ ಸೊಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಿದರು.

ಕೊರೋನಾ ಸೋಂಕಿನಿಂದ ನಿಧನರಾದವರ ಅಂತ್ಯಕ್ರಿಯೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಧ್ಯಮ ವರದಿ ಗಮನಿಸಿದ ಸಚಿವರು ಈ‌ ವಲಯದ ಕೂಡ್ಲುವಿನಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಪ್ರತಿ ನಿತ್ಯ ಈ ಮುಂಚೆ 3 ರಿಂದ 4 ಶವಗಳು ಬರುತ್ತಿದ್ದವು.  ಆದರೆ ಈಗ 22 ರಿಂದ 25 ಶವಗಳು ಬರುತ್ತಿದ್ದು ಅಲ್ಲಿಗೆ ಹೆಚ್ಚು ಸಿಬ್ಬಂದಿ ನೇಮಿಸಿ ಶವಗಳಿಗೆ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಬೊಮ್ಮನಹಳ್ಳಿ ವಲಯದಲ್ಲಿ ಪ್ರತಿ ವಾರ್ಡಿಗೆ ಎರಡರಂತೆ ಒಟ್ಟು 34 ಅಂಬುಲೆನ್ಸೆಗಳನ್ನು ಸೇವೆಗಾಗಿ ಸಿದ್ಧಗೊಳಿಸಲಾಗಿದ್ದು ಪ್ರತಿ ವಾರ್ಡಲ್ಲಿರುವ ಕೋವಿಡ್ ವಾರ್-ರೂಮ್ ಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸಿ ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಿದರು.

ಕಳೆದ ಸಭೆಯಲ್ಲಿ ನೀಡಿದ್ದ ಸೂಚನೆಯಂತೆ ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯ ಬಳಿಕ ಬೊಮ್ಮನಹಳ್ಳಿ ವಲಯದಲ್ಲಿ ನೂತನವಾಗಿ ಆರಂಭಿಸಿರುವ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಹಾಗೂ ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಈ ಸಂದರ್ಭದಲ್ಲಿ ವಲಯದ ಉಸ್ತುವಾರಿ ಆಯುಕ್ತ ಶ್ರೀ ರಾಜೇಂದ್ರ ಕಟಾರಿಯಾ, ಜಂಟಿ ಆಯುಕ್ತ ಶ್ರೀ ರಾಮಕೃಷ್ಣ, ಅಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!