ಜಿಲ್ಲೆಯ ಮೂವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ರ್ಯಾಂಕ್
ಮಂಗಳೂರು, ಎಪ್ರಿಲ್ 13, 2021: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿರವರ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿ ಸೇರಿದಂತೆ ಜಿಲ್ಲೆಯ ಮೂವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ರ್ಯಾಂಕ್ ಪಡೆದಿದ್ದಾರೆ.
2017ರಲ್ಲಿ ನೂತನವಾಗಿ ಆರಂಭಗೊಂಡ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವು ಶನಿವಾರ 10ನೇ ಎಪ್ರಿಲ್ 2021 ರಂದು ವಿಶ್ವವಿದ್ಯಾಲಯ ಸಭಾಂಗಣ, ಗದಗ ಇಲ್ಲಿ ನೆರವೇರಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರವರು ವಿವಿಧ ವಿಭಾಗಗಳ ರ್ಯಾಂಕ್ ವಿಜೇತರಿಗೆ ಪದವಿ ಪ್ರಧಾನ ಮಾಡಿದರು.
ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನಜೀವನಮಟ್ಟದಲ್ಲಿ ಸುಧಾರಣೆ ಖಾತರಿ ಪಡಿಸುವ ಉತ್ಕ್ರಷ್ಟ ಕೇಂದ್ರವಾಗುವ ಪರಿಕಲ್ಪನೆಯನ್ನಿಟ್ಟುಕೊಂಡು ಆರಂಭವಾದ ವಿಶ್ವವಿದ್ಯಾಲಯದಲ್ಲಿ ಎಂ.ಎ, ಎಂಬಿಎ, ಎಂಎಸ್ ಡಬ್ಲ್ಯೂ ಮತ್ತು ಎಂ.ಕಾಂ. ವಿಭಾಗಗಳಿದ್ದು, 2018-19ನೇ ಸಾಲಿನ ಮೊದಲ ಬ್ಯಾಚ್ನಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 108 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದು, ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಭಂಡಾರಿ ಎಂ.ಕಾಂ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ, ಚಿನ್ನದ ಪದಕ ಪಡೆದಿದ್ದಾರೆ.
ಎಂ.ಬಿ.ಎ ವಿಭಾಗದಲ್ಲಿ ಮಂಗಳೂರು ತಾಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯತ್ ಪಂ.ಅ.ಅಧಿಕಾರಿ ಕು.ಪೂರ್ಣಿಮ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
2019-20ನೇ ಸಾಲಿನಲ್ಲಿ ಒಟ್ಟು 124 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಭ್ಯಸಿಸಿದ್ದು, ಮಂಗಳೂರು ತಾಲೂಕು, ಬಾಳ ಗ್ರಾಮ ಪಂಚಾಯತ್, ಪಂ.ಅ. ಅಧಿಕಾರಿಯಾದ ಕು. ನಿಶಾ ಇವರು ಎಂ.ಎಸ್.ಡಬ್ಲ್ಯೂ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ, ಚಿನ್ನದ ಪದಕ ಪಡೆದಿದ್ದಾರೆ.
ಪರಮೇಶ್ವರ್ ಭಂಡಾರಿ, ಇವರು 2010ನೇ ಇಸವಿಯಲ್ಲಿ ಪಂ.ಅ.ಅಧಿಕಾರಿಯಾಗಿ ನೇಮಕಗೊಂಡು ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ದ.ಕ. ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕಛೇರಿಯಲ್ಲಿ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.