ಡ್ರೋನ್ ಕ್ಯಾಮೆರಾ ಪ್ರಾಯೋಗಿಕ ಪ್ರಾತ್ಯಕ್ಷಿಕೆ ವೀಕ್ಷಿಸಿದ ಜಿಲ್ಲಾಧಿಕಾರಿ
![ಡ್ರೋನ್ ಕ್ಯಾಮೆರಾ ಪ್ರಾಯೋಗಿಕ ಪ್ರಾತ್ಯಕ್ಷಿಕೆ ವೀಕ್ಷಿಸಿದ ಜಿಲ್ಲಾಧಿಕಾರಿ](https://thecanarapost.com/wp-content/uploads/2021/04/8-4-2021-Dron-news-photo-2-850x560.jpg)
![](https://thecanarapost.com/wp-content/uploads/2021/04/8-4-2021-Dron-news-photo-1.jpg)
ಕಾರವಾರ, ಏಪ್ರಿಲ್ 08, 2021: ಪ್ರಕೃತಿ ವಿಕೋಪ, ನೆರೆ ಹಾವಳಿಯಂತಹ ವಿಪತ್ತು ನಿರ್ವಹಣೆ ಮತ್ತು ಬೃಹತ್ ಸಭೆ, ಸಮಾರಂಭಗಳ ಸಂದರ್ಭದಲ್ಲಿ ನಡೆಯುವಂತಹ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಡ್ರೋನ್ ಕ್ಯಾಮೆರಾ ಬಳಕೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ನಡೆದ ಡ್ರೋನ್ ಕ್ಯಾಮೇರಾ ಬಳಕೆ ಹಾಗೂ ಕಾರ್ಯ ವೈಖರಿಯ ಪ್ರಾಯೋಗಿಕ ಪ್ರಾತ್ಯಕ್ಷಿಕೆಯ ನಂತರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಹಾಗೂ ಸಮುದ್ರ ಪ್ರದೇಶವಿದ್ದು, ನೆರೆ ಹಾವಳಿ, ಬೆಂಕಿ ಅವಗಢ, ಕಡಲ ಕೊರೆತದಂತಹ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಜಿಲ್ಲೆಯಲ್ಲಿ ನಡೆಯುವಂತ ಬೃಹತ್ ಸಭೆ, ಸಮಾರಂಭಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದು ಹೆಚ್ಚಾಗಿದೆ. ಹೀಗಾಗಿ ಈ ಎಲ್ಲಾ ಸಂದರ್ಭಗಳಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಡ್ರೋನ್ಕ್ಯಾಮೆರಾ ಬಳಕೆ ಅತ್ಯವಶ್ಯಕವಾಗಿದೆ.
ಈ ಹಿನ್ನಲೆಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಳಸಲಾಗುವ ಈ ಡ್ರೋನ್ ಕ್ಯಾಮೆರಾಗಳು ಸಮುದ್ರ, ಪ್ರವಾಹ ಹಾಗೂ ಕಾಡ್ಗಿಚ್ಚಿನಂತಹ ಪ್ರಕೃತಿ ವಿಪತ್ತುಗಳಲ್ಲಿ ಸಿಲುಕಿಕೊಂಡವರನ್ನು, ಪಕ್ಷಿನೋಟದ ಮೂಲಕ ಗುರಿತಿಸಿ ರಕ್ಷಿಸಲು ಮತ್ತು ಜನದಟ್ಟಣೆ ಆಗುವಂತಹ ಸಭೆ, ಸಮಾರಂಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿವೆ.
ಹೀಗಾಗಿ ವಿಪತ್ತು ನಿರ್ವಹಣಾ ನಿಧಿಯಿಂದ 12 ಲಕ್ಷ ವೆಚ್ಚದಲ್ಲಿ ಈ ಡ್ರೋನ್ ಕ್ಯಾಮೆರಾ ಬಳಕೆ ಆರಂಭಿಸಲಾಗಿದ್ದು, ಈ ಕ್ಯಾಮೆರಾ 200 ಮೀಟರ್ ಎತ್ತರ ಹಾಗೂ 2 ಕೀ. ಮಿ ದೂರದವರೆಗೆ ಹಾರಾಟ ನಡೆಸಿ ವಿವಿಧ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ ಎಂದರು.
ಉತ್ತರ ಕನ್ನಡ ಜಿಲ್ಲೆಯು ಭೂಗೋಳಿಕವಾಗಿ ವಿಸ್ತರವಾದ ಜಿಲ್ಲೆಯಾಗಿರುವ ಕಾರಣ ಎರಡು ಡ್ರೋನ್ ಕ್ಯಾಮೇರಾ ಬಳಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಭಟ್ಕಳ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲೂಕುಗಳನ್ನು ಒಂದು ವಿಭಾಗವನ್ನಾಗಿ ಮತ್ತು ಅಂಕೋಲಾ, ಕಾರವಾರ, ಜೋಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳನ್ನು ಮತ್ತೊಂದು ವಿಭಾಗವನ್ನಾಗಿ ಮಾಡಿಕೊಂಡಿದ್ದು, ಈ ಎರಡು ವಿಭಾಗಗಳಲ್ಲಿ ಡ್ರೋನ್ ಕ್ಯಾಮೆರಾ ಕಾರ್ಯಾಚರಣೆಗೆ ಅನುವು ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಡ್ರೋನ್ ಕ್ಯಾಮೆರಾ ಪ್ರಾಯೋಗಿಕ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಪ್ರಕೃತಿ ವಿಕೋಪದ ವಿಪತ್ತು ನಿರ್ವಹಣಾ ಅನುದಾನದಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒಳಗೊಂಡ ಪೋಲಿಸ್ ತಂಡವು ಈ ಡ್ರೋನ್ ಕ್ಯಾಮೆರಾದ ತಂತ್ರಜ್ಞಾನ ಅಳವಡಿಸಿಕೊಂಡಿದೆ.
ಈ ಕ್ರಮವು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಂತಹ ಕಾರ್ಯಾಚರಣೆ ಹಾಗೂ ಅಪರಾಧಗಳನ್ನ ತಡೆಯುವ ನಿಟ್ಟಿನಲ್ಲಿಇಟ್ಟಿರುವ ಮಹತ್ತರ ಹೆಜ್ಜೆಯಾಗಿದೆ. ಇದರಿಂದಾಗಿ ಜಿಲ್ಲಾಡಳಿತದ ಶಕ್ತಿ ಹೆಚ್ಚಲು ಸಾಧ್ಯವಾಗುತ್ತಿದ್ದು, ಜಿಲ್ಲಾ ಪೋಲಿಸ್ ಇಲಾಖೆಯ ಕಾರ್ಯ ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಡಿಎಸ್ಪಿ ಶಿವಾನಂದ ಚಲವಾದಿ, ಕಾರವಾರ ಸಿಪಿಐ ಸಂತೋಷ ಶೆಟ್ಟಿ ಹಾಗೂ ಇತರ ಪೋಲಿಸ್ ಸಿಬ್ಬಂದಿ ಉಪಸ್ತಿರಿದ್ದರು.