ಮಾ. 24 ರಂದು ವಿಶ್ವ ಕ್ಷಯರೋಗ ದಿನಾಚರಣೆ

 ಮಾ. 24 ರಂದು ವಿಶ್ವ ಕ್ಷಯರೋಗ ದಿನಾಚರಣೆ
Share this post

ಕಾರವಾರ, ಮಾರ್ಚ್ 23, 2021: ‘ಕ್ಷಯರೋಗ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ’ ಆದ್ದರಿಂದ ಕ್ಷಯರೋಗ ಮುಕ್ತ ಕರ್ನಾಟಕದೆಡೆಗೆ ನಮ್ಮ ಬದ್ಧತೆಗಳನ್ನು ಹೆಚ್ಚುಗೊಳಿಸಬೇಕು ಎಂಬ ಸಂಕಲ್ಪದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾ. 24ರಂದು 2021ನೇ ಸಾಲಿನ ವಿಶ್ವ ಕ್ಷಯರೋಗ ದಿನ ಆಚರಿಸುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ ನಾಯಕ ತಿಳಿಸಿದ್ದಾರೆ.

ಭಾರತವನ್ನು 2025 ರೊಳಗೆ ಕ್ಷಯ ಮುಕ್ತ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಟಿಬಿ ಸೋಲಿಸಿ, ದೇಶ ಗೆಲ್ಲಿಸಿ’ ಎಂಬ ಅಭಿಯಾನಪ್ರಾರಂಭಿಸಿದೆ. ಇದರಡಿ ನಡೆಸಲಾಗುತ್ತಿರುವ ‘ಕ್ಷಯಮುಕ್ತ ಕರ್ನಾಟಕ’ ಅಭಿಯಾನ ಯಶಸ್ವಿಗೊಳಿಸಲು ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿಯೂ ಜಾಥಾ, ಸಭಾ ಕಾರ್ಯಕ್ರಮ, ಕೆಂಪು ದೀಪ ಬೆಳಗಿಸುವುದು, ಚುನಾಯಿತ ಪ್ರತಿನಿಧಿಗಳಿಗೆ ಅರಿವು ಮೂಡಿಸುವುದು, ಕ್ಷಯರೋಗದ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆ, ಗೋಡೆ ಬರಹ ಮೂಲಕ ಕ್ಷಯರೋಗದ ಜಾಗೃತಿ ಮೂಡಿಸುವಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೆಂಪು ದೀಪ ಕಾರ್ಯಕ್ರಮ:
ಪ್ರಸಕ್ತ ಸಾಲಿನ ವಿಶ್ವ ಕ್ಷಯರೋಗ ದಿನಗುರುತಿಸಲು ಮತ್ತು “ಕ್ಷಯ ಮುಕ್ತ ಕರ್ನಾಟಕ” ಕ್ಕಾಗಿ ನಮ್ಮ ಪ್ರಯತ್ನಗಳನ್ನು ಪ್ರದರ್ಶಿಸಲು, ಕ್ಷಯ ರೋಗದ ಹಾನಿಕಾರಕ ಪರಿಣಾಮದ ಬಗ್ಗೆ ಗಮನ ಸೆಳೆಯಲು ಮಾ. 24ರಂದು ಕೆಂಪು ದೀಪ ಬೆಳಗಿಸಲಾಗುತ್ತಿದೆ.

ನಗರದ ಪ್ರಮುಖ ಸ್ಮಾರಕಗಳು, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಮತ್ತು ತಾಲೂಕಾ ಆಸ್ಪತ್ರೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಯವರ ಕಚೇರಿ ಹಾಗೂ ಆಯ್ದ ಸರಕಾರಿ ಕಟ್ಟಡಗಳಲ್ಲಿ ಕೆಂಪು ದೀಪ ಬೆಳಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಪ್ರತಿ ದಿನ 5 ಸಾವಿರ ಹೊಸ ಕ್ಷಯರೋಗಿಳ ಪತ್ತೆ: ಕ್ಷಯರೋಗವು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ದೇಶದಲ್ಲಿ ಪ್ರತಿ ದಿನ ಸುಮಾರು 5 ಸಾವಿರ ಹೊಸ ಕ್ಷಯರೋಗಿಗಳು ಪತ್ತೆಯಾಗುತ್ತಿದ್ದಾರೆ.

ಈ ಪೈಕಿ ಸುಮಾರು 6 ನೂರು ಜನರು ಮರಣ ಹೊಂದುತ್ತಿದ್ದಾರೆ. ವಯಸ್ಕರಲ್ಲಿ ಹೆಚ್ಚಾಗಿ ಕ್ಷಯ ರೋಗವು ಕಂಡು ಬರುತ್ತಿದ್ದು, ಇದರಿಂದ ದೇಶದ ಆರ್ಥಿಕ, ಸಾಮಾಜಿಕ ಪ್ರಗತಿಗೆ ತೊಡಕುಂಟಾಗುತ್ತಿದೆ.

ಕ್ಷಯರೋಗವುಳ್ಳ ರೋಗಿಯು ಕೆಮ್ಮಿದಾಗ, ಸೀನಿದಾಗ, ಶ್ವಾಸದಿಂದ ಹೊರಹೊಮ್ಮುವ ಉಸಿರಿನ ತುಂತುರು ಹನಿಗಳಲ್ಲಿರುವ ಬ್ಯಾಕ್ಟೆರಿಯಾಗಳು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಕಫದಲ್ಲಿ ಕ್ರಿಮಿಯಿರುವ ಚಿಕಿತ್ಸೆ ಪಡೆಯದ ಕ್ಷಯರೋಗಿಯಿಂದ ಒಂದು ವರ್ಷಕ್ಕೆ 10-15 ಜನರಿಗೆ ಕ್ಷಯರೋಗದ ಸೋಂಕು ಹರಡುತ್ತಿದೆ.

ಕ್ಷಯರೋಗ ಲಕ್ಷಣಗಳು: ಎರಡು ವಾರಕ್ಕಿಂತ ಹೆಚ್ಚು ಅವಧಿಯ ಸತತವಾದ ಕೆಮ್ಮು, ಸಂಜೆ ವೇಳೆ ಜ್ವರ, ಕಫ, ಕಫದಲ್ಲಿ ರಕ್ತ, ಎದೆ ನೋವು, ಉಸಿರಾಟದ ತೊಂದರೆ, ತೂಕ ಕಡಿಮೆಯಾಗುವುದು, ದುಗ್ದ ರಸ ಗ್ರಂಥಿಗಳ ಊತ ಇತ್ಯಾದಿ.

ಈ ಸಮಯದಲ್ಲಿ ನಿರ್ಲಕ್ಷ್ಯಿಸದೆ ಕಫ ಪರೀಕ್ಷೆಗೊಳಗಾಗಿ ಕ್ಷಯವೆಂದು ದೃಢಪಟ್ಟಲ್ಲಿ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಆ ವ್ಯಕ್ತಿಯು ರೋಗದಿಂದ ನರಳುವುದರ ಜೊತೆಗೆ ಕುಟುಂಬದಲ್ಲಿ , ಸಮುದಾಯದಲ್ಲಿ ಹೊಸ ರೋಗಿಗಳನ್ನು ಸೃಷ್ಠಿಸುವಲ್ಲಿ ಕಾರಣಕರ್ತನಾಗುತ್ತಾನೆ.

ಕ್ಷಯರೋಗ ಪತ್ತೆ: ಕ್ಷ ಯರೋಗದ ಲಕ್ಷಣಗಳಿದ್ದಲ್ಲಿ ತಡ ಮಾಡದೇ ಹತ್ತಿರದ ಆರೋಗ್ಯ ಸಂಸ್ಥೆಗೆ ಹೋಗಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ /ಕ್ಷ-ಕಿರಣ NAAT ಮುಖಾಂತರ ಕ್ಷಯರೋಗ ಕಂಡು ಹಿಡಿಯಬಹುದು. ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ ಕಾರವಾರ ಮತ್ತು ಪಂಡಿತ ಸಾರ್ವಜನಿಕ ಆಸ್ಪತ್ರೆ ಶಿರಸಿಯಲ್ಲಿ CB-NAAT ಕ್ಷಯರೋಗ ಕಂಡು ಹಿಡಿಯುವ ವ್ಯವಸ್ಥೆ ಇರುತ್ತದೆ,

ತಾಲೂಕು ಆಸ್ಪತ್ರೆ ಕುಮಟಾ, ಹೊನ್ನಾವರ, ಭಟ್ಕಳ್, ಹಳಿಯಾಳ, ಮುಂಡಗೋಡ, ಸಾರ್ವಜನಿಕ ಆಸ್ಪತ್ರೆ ದಾಂಡೇಲಿ ಯಲ್ಲಿ TRUE NAAT ಹಾಗೂ ಜಿಲ್ಲಾ ಆಸ್ಪತ್ರೆ, ಎಲ್ಲ ತಾಲೂಕಾ ಆಸ್ಪತ್ರೆ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗದ ತಪಾಸಣೆ ಉಚಿತ ಮಾಡಲಾಗುತ್ತಿದೆ.

ಕ್ಷಯರೋಗ ಚಿಕಿತ್ಸೆ: ಒಂದು ವೇಳೆ ಕ್ಷಯವೆಂದು ದೃಡಪಟ್ಟಲ್ಲಿ ಈಗ ಲಭ್ಯವಿರುವ ಅಗತ್ಯ ಗುಣಮಟ್ಟದ ಡಾಟ್ಸ್ ಅಲ್ಪಾವಧಿ ಚಿಕಿತ್ಸೆಯಿಂದ ಸಂಪೂರ್ಣ ಗುಣ ಹೊಂದಬಹುದು.

ಕ್ಷಯರೋಗಿಯು ಔಷಧಿಯನ್ನು ನೀಡುವವರ ನೇರ ನಿಗಾವಣೆಯಲ್ಲಿ ಸೇವಿಸಬೇಕು. ಔಷಧಿ ನೀಡುವವರನ್ನು ಕ್ಷಯ ರೋಗಿಯ ಮನೆಗೆ ಹತ್ತಿರವಾದ ಮತ್ತು ಒಪ್ಪಿಗೆ ಇರುವ ಜವಾಬ್ದಾರಿ ಹೊಂದಿದವರನ್ನೇ ಗುರುತಿಸಲಾಗುತ್ತದೆ.

ಇದನ್ನು ಸಂಪೂರ್ಣ 6-8 ತಿಂಗಳು ತೆಗೆದುಕೊಂಡಲ್ಲಿ ಕ್ಷಯದಿಂದ ಪೂರ್ತಿ ಗುಣ ಹೊಂದಬಹುದು.

ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕ್ಷಯರೋಗ ಚಿಕಿತ್ಸೆ ಲಭ್ಯವಿರುತ್ತದೆ. ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ಎಂ.ಡಿ.ಆರ್/ಡಿ.ಅರ್.ಟಿ.ಬಿ ರೋಗ ನಿರ್ವಹಣಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ನಿಕ್ಷಯ ಪೋಷಣಾ ಯೋಜನೆ: ಕ್ಷಯರೋಗಿಗಳು ಸರಿಯಾಗಿ ಚಿಕತ್ಸೆ ಪಡೆಯಲು ಹಾಗೂ ಚಿಕತ್ಸೆ ಯಶಸ್ವಿಯಾಗಲು ಪೌಷ್ಟಿಕ ಆಹಾರದ ಅವಶ್ಯತಕತೆ ಬಹಳ ಪ್ರಮುಖವಾದುದು. ಆದ್ದರಿಂದ ನಿಕ್ಷಯ ಪೋಷಣಾ ಯೋಜನೆಯಡಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕ್ಷಯರೋಗಿಗಳಿಗೆ ಚಿಕಿತ್ಸೆ ಪಡೆಯುವ ಅವಧಿಗೆ ಪ್ರತಿ ತಿಂಗಳು ರೂ 500/- ರಂತೆ ಪ್ರೋತ್ಸಾಹ ಧನ ಸಹಾಯವನ್ನು ನೇರವಾಗಿ ರೋಗಿಗಳ ಬ್ಯಾಂಕ್ ಖಾತೆಗೆ ನೀಡಲಾಗುತ್ತಿದೆ.

ಟ್ರೀಟ್ಮೆಂಟ್ ಸಪೋರ್ಟರ್: ಕ್ಷಯರೋಗಿಗಳಿಗೆ 6 ತಿಂಗಳು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಕ್ಕಾಗಿ ಚಿಕಿತ್ಸೆ ನೀಡಿದ ಅರ್ಹ ಚಿಕಿತ್ಸಾ ಬೆಂಬಲಿಗರಿಗೆ 1 ಸಾವಿರ ರೂ ಹಾಗೂ ಡಿ.ಆರ್ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಿದಕ್ಕಾಗಿ 5 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಪ್ರೈವೇಟ್ ಪ್ರೊವೈಡರ್ ಇನ್ಸೆಂಟಿವ್- ಖಾಸಗಿ ಆರೋಗ್ಯ ಸಂಸ್ಥೆಗಳು ಕ್ಷಯರೋಗ ಪತ್ತೆ ಮಾಡಿ ನೋಟಿಪೈ ಮಾಡಿದ್ದಲ್ಲಿ ರೂ 500/- ಹಾಗೂ ಟಿ ಬಿ ಚಿಕಿತ್ಸೆ ಪೂರ್ಣವಾಗಿ ನೀಡಿದ್ದಲ್ಲಿ ರೂ 500/- ರಂತೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಇನ್ಫಾರ್ಮರ್ ಇನ್ಸೆನ್ಟಿವ್ಸ್- ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಪತ್ತೆಯಾಗುವ ಕ್ಷಯರೋಗಿಗಳನ್ನು ರೆಫರ್ ಮಾಡಿದವರಿಗೆ (ಸರಕಾರಿ ವೇತನದಾರರು ಹೊರತುಪಡಿಸಿ) ಪ್ರತಿ ಕ್ಷಯರೋಗ ಪ್ರಕರಣಕ್ಕೆ ರೂ 500/- ರಂತೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಕ್ಷಯರೋಗಕ್ಕೆ ಸಂಬಂಧಿಸಿದಂತೆ ಎಲ್ಲಾ ಪರೀಕ್ಷೆ, ಚಿಕಿತ್ಸೆ(ಡಾಟ್ಸ್)ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಕ್ಷಯರೋಗಿಗಳಿಗೆ ಮಾನಸಿಕ ಬೆಂಬಲ ಒದಗಿಸಲು ಪೇಷಂಟ್ ಪ್ರೊವೈಡರ್ ಮೀಟಿಂಗ್ , ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಎನ್.ಜಿ.ಒ ಸದಸ್ಯರುಗಳಿಗೆ ಕಾರ್ಯಕ್ರಮ, ಸಮುದಾಯ ಸಭೆಗಳಲ್ಲಿ ಕ್ಷಯರೋಗದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.

ಆರೋಗ್ಯ ಇಲಾಖೆಯೊಂದಿಗೆ ಇತರೇ ಎಲ್ಲ ಇಲಾಖೆಗಳವರೂ ಸಹ ಕ್ಷಯರೋಗದ ಬಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ಸಹಕರಿಸಿ ದೇಶವನ್ನು ಕ್ಷಯಮುಕ್ತ ಮಾಡುವಲ್ಲಿ ಸಹಕಾರಿಯಾಗುತ್ತದೆ.
ಕ್ಷಯರೋಗ ಮುಕ್ತ ಸಮಾಜ ನಿಮಾಣ ಕ್ಕೆ ಎಲ್ಲ ಸಾರ್ವಜನಿಕರು ಕೈ ಜೋಡಿಸಬೇಕೆಂದುಡಿ ಹೆಚ್ ಒ ವಿನಂತಿಸಿದೆ.

Subscribe to our newsletter!

Other related posts

error: Content is protected !!