ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಕೋವಿಡ್ ಜಾಗೃತಿ
ಉಡುಪಿ, ಮಾರ್ಚ್ 10, 2021: ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ನಡೆದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೋವಿಡ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಮಾಸ್ಕ್ ಧರಿಸದೇ ಬಂದವರಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು. ಸ್ಥಳದಲ್ಲೇ ಆರೋಗ್ಯ ತಪಾಸಣಾ ಶಿಬಿರ ಅಯೋಜಿಸಿದ್ದು, ಸಾರ್ವಜನಿಕರು ಹಾಗೂ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಸ್ಥಳದಲ್ಲಿ ಕೋವಿಡ್ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಿದ್ದು, 25 ಕ್ಕೂ ಅಧಿಕ ಮಂದಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ತಮ್ಮ ಗಂಟಲು ಮಾದರಿಗಳನ್ನು ನೀಡಿದರು.
ಗ್ರಾಮದ ಹಿರಿಯ ನಾಗರೀಕರಿಗೆ ಕೋವಿಡ್ ಲಸಿಕೆ ನೀಡಲು ವ್ಯವಸ್ಥೆ ಮಾಡಿದ್ದು, ಗ್ರಾಮಗಳಿಂದ 40 ಕ್ಕೂ ಅಧಿಕ ಮಂದಿಗೆ ವಾಹನ ವ್ಯವಸ್ಥೆ ಮಾಡಿ ಹೆಬ್ರಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ನೀಡಲಾಯಿತು.
ಡಿಹೆಚ್‌ಓ ಡಾ.ಸುದೀರ್ ಚಂದ್ರ ಸೂಡಾ, ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ, ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ವಿಶೇಷಾಧಿಕಾರಿ ಡಾ.ಪ್ರೇಮಾನಂದ ಹಾಗೂ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.