ಜನ ಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳಿ: ಜಿಲ್ಲಾಧಿಕಾರಿ

 ಜನ ಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳಿ: ಜಿಲ್ಲಾಧಿಕಾರಿ
Share this post


ಮಂಗಳೂರು, ಮಾರ್ಚ್ 18, 2021: ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಜನ ಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಎಚ್ಚರವಹಿಸಿ, ವಿಳಂಬವಿಲ್ಲದೇ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರು ಸೂಚನೆ ನೀಡಿದರು.

ಅವರು ಮಂಗಳವಾರ ಸಂಜೆ ತಮ್ಮ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪುನರ್ ಆರಂಭ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ, ಗ್ಯಾಸ್ ಪೈಪ್ ಅಳವಡಿಕೆ, ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿ ಸೇರಿದಂತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಎಲ್ಲ ಅಧಿಕಾರಿಗಳು ಹಾಗೂ ಅಭಿಯಂತರರು ಸಮನ್ವಯದೊಂದಿಗೆ ಚರ್ಚಿಸಿ ಏಕಕಾಲದಲ್ಲಿ ಎಲ್ಲಾ ಕಾಮಗಾರಿಗಳನ್ನು ಮಾಡಿದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ಹೆಚ್ಚಿನ ತೊಂದರೆ ಉಂಟಾಗುವುದನ್ನು ತಡೆಯಲು ಸಾಧ್ಯ

ಡಾ. ರಾಜೇಂದ್ರ ಕೆ.ವಿ

ನ್ಯಾಯಾಲಯದ ಆದೇಶದ ಅನ್ವಯ ಸ್ಥಗಿತಗೊಳಿಸಲಾಗಿದ್ದ, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಮತ್ತೆ ಮುಂದುವರಿಸಲು ಕೋರ್ಟ್ ಅನುಮತಿ ನೀಡಿದೆ. ಕಾಮಗಾರಿಗಳನ್ನು ಪುನರ್ ಆರಂಭಿಸಲು ಅಭಿಯಂತರರು ಯೋಜನೆಯನ್ನು ರೂಪಿಸಿ, ಕಾಮಗಾರಿಗೆ ವಸ್ತುಗಳನ್ನು ಸಂಗ್ರಹಿಸುವುದರೊಂದಿಗೆ ನಿಗಧಿತ ಕಾಲಾವಧಿಯವರೆಗೆ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ ಈ ಯೋಜನೆಯಡಿ 31 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವುಗಳಲ್ಲಿ ಶೇ. 90 ರಷ್ಟು ಪೂರ್ಣಗೊಂಡಿರುವ ಕಾಮಗಾರಿಗಳನ್ನು ತತಕ್ಷಣದಲ್ಲಿ ಪೂರ್ಣಗೊಳಿಸಬೇಕು. ಬಾಕಿ ಉಳಿದ ಕಾಮಗಾರಿಗಳನ್ನು ಮುಂಬರುವ ಮುಂಗಾರು ಮಳೆಯ ಆರಂಭದ ಮುನ್ನವೇ ಪೂರ್ಣಗೊಳಿಸಬೇಕು ಎಂದ ಅವರು. ಸಾರ್ವಜನಿಕ ರಸ್ತೆಗಳ ಸಂಚಾರ ನಿಲುಗಡೆ ಮಾಡಿ ಕೈಗೊಂಡಿರುವ ಕಾಮಗಾರಿಗಳನ್ನು ರಾತ್ರಿ, ಹಗಲು ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಬೇರೆ ಬೇರೆ ಕಾರ್ಮಿಕರನ್ನು ನಿಯೋಜಿಸುವುದರೊಂದಿಗೆ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಕಾಮಗಾರಿಗಳನ್ನು ಕೈಗೊಳ್ಳುವ ಸ್ಥಳದಲ್ಲಿ ಎಲ್ಲೆಂದರಲ್ಲಿ ಪೈಪ್‍ಗಳು ಹಾಗೂ ಮತ್ತಿತರ ವಸ್ತುಗಳನ್ನು ಹಾಕುವುದರಿಂದ ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಿ, ದಾಸ್ತಾನು ಮಾಡಬೇಕು ಎಂದ ಅವರು, ಕಾಮಗಾರಿಗಳು ಮುಗಿದ ನಂತರ ಅಲ್ಲಿನ ಸ್ಥಳಗಳು ಯಥಾಸ್ಥಿತಿಯಲ್ಲಿರುವಂತೆ, ಹೊಂಡ ತಗ್ಗು ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ, ಗೇಲ್ ಇಂಡಿಯಾ ಕಂಪೆನಿಯವರು ಗ್ಯಾಸ್ ಪೈಪ್ ಅಳವಡಿಕೆ, ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿ ಸೇರಿದಂತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಎಲ್ಲ ಅಧಿಕಾರಿಗಳು ಹಾಗೂ ಅಭಿಯಂತರರು ಸಮನ್ವಯದೊಂದಿಗೆ ಚರ್ಚಿಸಿ ಒಮ್ಮೆಲೆ ಕೈಗೊಂಡಾಗ ಏಕಕಾಲದಲ್ಲಿ ಎಲ್ಲಾ ಕಾಮಗಾರಿಗಳನ್ನು ಮಾಡಿದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ಹೆಚ್ಚಿನ ತೊಂದರೆ ಉಂಟಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರಸ್ತೆ ಕಾಮಗಾರಿ ಕೈಗೊಳ್ಳಲು ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆಯವರು ಮುಂದಾಗಬೇಕೆಂದ ಅವರು, ವಿನಾ ಕಾರಣ ಗುತ್ತಿಗೆದಾರರು ಕಾಮಗಾರಿಗಳನ್ನು ಒಂದು, ಎರಡು ದಿನ ನಿಲ್ಲಿಸುವುದು ಕಂಡು ಬಂದಾಗ ಕೂಡಲೇ ಜಿಲ್ಲಾಡಳಿತಕ್ಕೆ ವರದಿಯನ್ನು ಸಹ ನೀಡಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ಮಹಾಪೌರ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಹಾನಗರ ಪಾಲಿಕೆಯ ಕಿರಿಯ ಅಭಿಯಂತರರ ನೆರವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಕಾಮಗಾರಿಗಳು ಮಾನ್ಸೂನ್ ಮಳೆಯ ಪ್ರಾರಂಭಕ್ಕೂ ಮುನ್ನ ಪೂರ್ಣಗೊಳಿಸದಿದ್ದಲ್ಲಿ ಮಳೆಯ ನೀರು ಎಲ್ಲೆಂದರಲ್ಲಿ ನುಗ್ಗಿ ಮನೆಗಳಿಗೆ ಹಾಗೂ ವ್ಯಾಪಾರಸ್ಥರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಕಾಳಜಿ ವಹಿಸಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದರು.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪ್ರೊಬೇಶನರಿ ಐ.ಎ.ಎಸ್ ಮೋನಾ ರೋತ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ದಿನೇಶ್, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರಾ ಹಾಗೂ ವಿವಿಧ ಇಲಾಖೆಯ ಅನುಷ್ಟಾನಾಧಿಕಾರಿಗಳು, ಅಭಿಯಂತರರುಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!