ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತೆ ವಹಿಸಿ: ಜಿ.ಜಗದೀಶ್
ಉಡುಪಿ, ಮಾರ್ಚ್ 16, 2021: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆ ಕಂಡುಬರದಂತೆ ಅಧಿಕಾರಿಗಳು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಗ್ರಾಮಗಳನ್ನು ಗುರುತಿಸಿ, ಈ ಬಾರಿ ಆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬರದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕು ಮಟ್ಟದಲ್ಲಿ ಸಭೆಗಳಲ್ಲಿ ನಡೆಸಿ, ತಮ್ಮ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕುರಿತಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಪಿಡಿಓ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಗಳ ಅಭಿಪ್ರಾಯ ಪಡೆದು ಟೆಂಡರ್ ಪ್ರಕ್ರಿಯೆಗಳನ್ನು ಸಿದ್ಧ ಮಾಡಿಟ್ಟುಕೊಂಡು, ಸಮಸ್ಯೆ ತಲೆದೋರಿದ ಕೂಡಲೇ ನೀರು ಸರಬರಾಜು ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭ, ಪೌರಾಯುಕ್ತ ಉದಯ ಶೆಟ್ಟಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಹಳ್ಳಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.