ತೆಂಗಿನ ಬೆಳೆಯಲ್ಲಿ ಬಿಳಿನೊಣ ಹಾನಿಯ ನಿಯಂತ್ರಣ ಕ್ರಮಗಳು
ಉಡುಪಿ, ಮಾಚ್ 10, 2021: ತೆಂಗಿನ ಬೆಳೆಯಲ್ಲಿನ ಪ್ರಮುಖ ಕೀಟ ರುಗೋಸ್ ಸುರುಳಿಯಾಕಾರದ ಬಿಳಿನೊಣದ ಹಾನಿಯ ಲಕ್ಷಣ ಮತ್ತು ಹತೋಟಿ ಕ್ರಮಗಳು ಈ ಕೆಳಗಿನಂತಿವೆ.
ಬಿಳಿ ನೊಣ ಹಾನಿಯ ಲಕ್ಷಣಗಳು:
- ಮರಿಗಳು ಹಾಗೂ ಪ್ರೌಢ ಕೀಟಗಳು ಗರಿಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ಆದ್ದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗುತ್ತವೆ.
- ಮರಿಹಂತಗಳು ಸಿಹಿಯಾದ ಜೇನಿನ ತರಹದ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಎಲೆಗಳಲ್ಲಿ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
- ಈ ಕೀಟವು ಗಾಳಿಯ ಮೂಲಕ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತದೆ.
ಹತೋಟಿ ಕ್ರಮಗಳು:
- ಬಾದಿತ ಗಿಡಗಳ ಎಲೆಗಳನ್ನು ಕಿತ್ತು ಸುಡಬೇಕು.
- ಹಳದಿ ಜಿಗುಟಾದ ಆಕರ್ಷಕ ಬಲೆಗಳನ್ನು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್ಗೆ ಹರಳೆಣ್ಣೆ ಹಚ್ಚಿ ತೋಟದಲ್ಲಿ ಇಡಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳು ಬಲೆಗೆ ಅಂಟಿಕೊಳ್ಳುತ್ತವೆ.
- ರುಗೋಸ್ ಕೀಟ ಬಾಧೆಯನ್ನು ನಿಯಂತ್ರಿಸಲು 1% ಬೇವಿನ ಎಣ್ಣೆಯನ್ನು
ಸಾಬೂನಿನ ದ್ರಾವಣದಲ್ಲಿ ಕರಗಿಸಿ 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು. - ಹೆಚ್ಚಿನ ನೀರಿನ ಪ್ರಮಾಣ ಲಭ್ಯವಿದ್ದಲ್ಲಿ ಹದಿನೈದು ದಿನಗಳ ಅಂತರದಲ್ಲಿ ನೀರಿಗೆ ಸ್ವಲ್ಪ ಸಾಬೂನಿನ ದ್ರಾವಣವನ್ನು ಬೆರೆಸಿ, ಸಿಂಪಡಿಸಬೇಕು. ಇದರಿಂದ ಎಲೆಗಳ ಹಿಂಭಾಗದಲ್ಲಿರುವ ಬಿಳಿನೊಣದ ಸಂಖ್ಯೆಗಳನ್ನು ಕಡಿಮೆ ಮಾಡಬಹುದು.
- ಕ್ರೈಸೂಪರ್ಲಾ ಜರಿಹುಳು ಅಥವಾ ಡೈಕೋಕ್ರೈಸಾ ಆಸ್ಟರ ಪರತಂತ್ರ ಜೀವಿಗಳನ್ನು ಒಂದು ಹೆಕ್ಟೇರಿಗೆ ಒಂದು ಸಾವಿರ ಮೊಟ್ಟೆ ಅಥವಾ ಮರಿಗಳನ್ನು ಹದಿನೈದು ದಿನಗಳ ಮಧ್ಯಂತರದಲ್ಲಿ ಬಿಡುಗಡೆ ಮಾಡಬೇಕು.
- ಹೊಸದಾಗಿ ಜೈವಿಕ ಶಿಲೀಂಧ್ರ ಐಸಿರಿಯಾ ಫ್ಯೂಮೋಸೋರೋಸಿಸ್ (5ಗ್ರಾಂ/ಲೀ) ಬಳಸಿ ಪ್ರೌಢ ಹಾಗೂ ಮರಿಗಳನ್ನು ನಾಶ ಮಾಡುವ ತಂತ್ರಜ್ಞಾನ ಲಭ್ಯವಿದ್ದು, ಈ ಶಿಲೀಂಧ್ರವನ್ನು ಬಳಸುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಬಿಳಿನೊಣಗಳ ನಿಯಂತ್ರಣ ಮಾಡಬಹುದು.
- ಕೀಟನಾಶಕಗಳ ಬಳಕೆ ಬಿಳಿನೊಣ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಲ್ಲ. ಆದ್ದರಿಂದ ನೈಸರ್ಗಿಕ ಶತ್ರುಗಳು ಹಾಗೂ ಪರಾವಲಂಬಿ ಜೀವಿಗಳನ್ನು ಹೆಚ್ಚಿಸಲು ಅನಧಿಕೃತ ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಉಡುಪಿ ದೂ.ಸಂಖ್ಯೆ: 0820-2520590/ 2522837 ಅನ್ನು ಸಂಪರ್ಕಿಸುವAತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.