ಉಡುಪಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿಗೆ ಸಿದ್ಧತೆ

 ಉಡುಪಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿಗೆ ಸಿದ್ಧತೆ
Share this post

ಉಡುಪಿ, ಮಾಚ್ 09, 2021: ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಮಾರ್ಚ್ 17 ರಿಂದ ನಡೆಯುವ ಭಾರತೀಯ ಸೇನೆಯ ನೇಮಕಾತಿ ರ‍್ಯಾಲಿಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕುರಿತಂತೆ ನಗರಸಭೆ ವತಿಯಿಂದ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕ್ರೀಡಾಂಗಣದಲ್ಲಿ ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಭ್ಯರ್ಥಿಗಳ ಶಾಲಾ ಅಂಕಪಟ್ಟಿಗಳ ಪರಿಶೀಲನೆಗೆ ಶಿಕ್ಷಣ ಇಲಾಖೆಯ 20 ಮಂದಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಅಗತ್ಯವಿದ್ದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ನೇಮಕಾತಿಗಾಗಿ ಪ್ರತಿದಿನ ಸುಮಾರು 3000 ಮಂದಿ ಅಭ್ಯರ್ಥಿಗಳು ಆಗಮಿಸಲಿದ್ದು, ನೂಕು ನುಗ್ಗಲು ತಪ್ಪಿಸಲು ಮತ್ತು ರ‍್ಯಾಲಿಯು ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕ್ರೀಡಾಂಗಣದಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ ಮತ್ತು ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು ಮತ್ತು ಜಿಲ್ಲೆಯಲ್ಲಿ ನಡೆಯುವ ಸೇನಾ ನೇಮಕಾತಿ ರ‍್ಯಾಲಿಯು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ, ಸೇನೆಯ ಅಧಿಕಾರಿಗಳು ಕೋರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ಜಿ.ಜಗದೀಶ್ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸೇನಾ ನೇಮಕಾತಿ ವಿಭಾಗದ ಕರ್ನಲ್ ದುಬಾಷ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!