ಕೊವೀಡ್-19 ಲಸಿಕೆ ಪಡೆಯಲು ಮುಂದಾಗಬೇಕು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

 ಕೊವೀಡ್-19 ಲಸಿಕೆ ಪಡೆಯಲು ಮುಂದಾಗಬೇಕು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
Share this post

ಕಾರವಾರ, ಮಾರ್ಚ್ 05, 2021: ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೀರಿದ ಅನಾರೋಗ್ಯ ಪೀಡಿತ ಜನರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಸಾರ್ವಜನಿಕರು ನಿರ್ಭಿತಿಯಿಂದ ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದ್ದಾರೆ.

ಪ್ರಥಮ ಹಾಗೂ ದ್ವಿತಿಯ ಹಂತದ ಲಸಿಕಾ ವಿತರಣೆಯನ್ನು ಜಿಲ್ಲೆಯಲ್ಲಿ ಉತ್ತಮವಾದ ರೀತಿಯಲ್ಲಿ ಯಶಸ್ವಿಗೊಳಿಸಲಾಗಿದೆ. ಮೊದಲ ಹಂತದಲ್ಲಿ ಶೇ. 73.60ರಷ್ಟು ಪಲಿತಾಂಶ ಕಂಡುಬಂದಿದೆ. ಎರಡನೇ ಹಂತದಲ್ಲಿ ಶೇ. 76.7ರಷ್ಟು ಪಲಿತಾಂಶ ಕಂಡುಬಂದಿದೆ. ಹೀಗಾಗಿ ಈ ಎರಡು ಹಂತದ ಲಸಿಕಾ ವಿತರಣೆ ಜಿಲ್ಲೆಯಲ್ಲಿ ಯಶ್ವಿಯಾಗಿದ್ದು,ರಾಜ್ಯದಲ್ಲಿ ಮೊದಲ ಐದು ಸ್ಥಾನ ಗಳಿಸಿದ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೂ ಒಂದಾಗಿದೆ.

ಕೋವಿಶಿಲ್ಡ್ ಲಸಿಕೆ ಪಡೆದುಕೊಂಡಿದ್ದರಿಂದ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಸಾರ್ವಜನಿಕರು ನಿರ್ಭೀತಿಯಿಂದ ಸಮೀಪದ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಿಗೆ ತೆರಳಿ ಈಗಾಗಲೇ ಜಾರಿಯಲ್ಲಿರುವ ಮೂರನೇ ಹಂತದಲ್ಲಿ ಲಸಿಕೆ ಪಡೆದುಕೊಳ್ಳಬಹುದು ಎಂದರು.

ಮಾರ್ಚ 1 ರಿಂದ 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು, 45 ರಿಂದ 59 ವರ್ಷದ ವಯೋಮಾನದ Co-Morbidity ಇರುವ ನಾಗರೀಕರಿಗೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಮಾರ್ಚ 8ರಿಂದ ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಹಾಗೂ ಆಯುಷ್ಮಾನ್ ಭಾರತ/ಆರೋಗ್ಯ ಕರ್ನಾಟಕ ದಡಿಯಲ್ಲಿ ನೋಂದಣಿ ಪಡೆದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಲಸಿಕೆ ವಿತರಿಸಲು ಕೆಲವು ಖಾಸಗಿ ಆಸ್ಪತ್ರೆಗಳನ್ನು ಕೊವಿಡ್ ವ್ಯಾಕ್ಸಿನೆೇಷನ್ ಸೆಂಟರ್ ಮಾಡಲಾಗುತ್ತಿದೆ.

ಇದಕ್ಕಾಗಿ ಶಿರಸಿಯ ಟಿಎಸ್‍ಎಸ್ ಆಸ್ಪತ್ರೆ, ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ, ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್ ಹಾಗೂ ಹೈಟೇಕ್ ಲೈಫ್ ಲೈನ್ ಆಸ್ಪತ್ರೆ, ಕಾರವಾರದ ಅರ್ಥ್ ಮೆಡಿಕಲ್ ಸೆಂಟರ್ ಲಸಿಕೆ ವಿತರಣೆಗೆ ಮುಂದೆ ಬಂದಿವೆ.

ಸಾರ್ವಜನಿಕರು ಎಲ್ಲ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಗುರುತಿಸಲಾಗಿರುವ ಈ ಮೇಲಿನ ಐದು ಖಾಸಗಿ ಆಸ್ಪತ್ರೆಯಲ್ಲಿ 250 ರೂ ಹಣ ನೀಡಿ ಲಸಿಕೆ ಪಡೆದುಕೊಳ್ಳಬಹುದು ಎಂದರು.

ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರದ ನಾಲ್ಕು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ.

ಜಿಲ್ಲಾ ಮತ್ತು ತಾಲೂಕ ಸರಕಾರಿ ಆಸ್ಪತ್ರೆಗಳು ಹಾಗೂ ಗುರುತಿಸಲಾಗಿರುವ ಈ ಮೇಲಿನ ಐದು ಖಾಸಗಿ ಆಸ್ಪತ್ರೆಯಲ್ಲಿ ವಾರದ ಏಳು ದಿನ ಬೆಳಿಗ್ಗೆ 10 ರಿಂದ ಸಂಜೆ 4 ರವೆಗೆ ಲಸಿಕೆ ವಿತರಣೆ ಮಾಡಲಾಗುತ್ತದೆ.

ಒಂದು ಕೋವಿಶಿಲ್ಡ್ ಡೋಸ್‍ನಲ್ಲಿ 10 ಜನರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಲಸಿಕೆ ಹಾಳಾಗುವುದನ್ನು ತಡೆಯುವ ದೃಷ್ಟಿಯಿಂದ 10 ಜನರನ್ನು ಒಗ್ಗೂಡಿಸಿಕೊಂಡು ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ನಾಗರೀಕರು ತಾವಾಗಿಯೇ ಕೋವಿನ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಕೊಂಡು ತಮಗೆ ಅನುಕೂಲವಿರುವ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದು.

ಅಲ್ಲದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಿಕೊಂಡು ಕೂಡಾ ಲಸಿಕೆ ಪಡೆಯಲು ಅವಕಾಶವಿದೆ. ಸಾರ್ವಜನಕರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡುವಾಗ ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್ ಅಥವಾ ಯಾವುದಾದರೊಂದು ಫೋಟೋ ಇರುವ ಐ.ಡಿ ಕಾರ್ಡ್‍ನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ, ಆರ್ ಸಿ ಹೆಚ್ ಡಾ. ರಮೇಶ್ ರಾವ್ ಹಾಜರಿದ್ದರು.

Subscribe to our newsletter!

Other related posts

error: Content is protected !!