ಕೋವಿಡ್ ನಿಯಮ ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಲು ಮಾರ್ಷಲ್ ಗಳ ನೇಮಕ: ಜಿಲ್ಲಾಧಿಕಾರಿ
ಉಡುಪಿ ಮಾರ್ಚ್ 3, 2021: ಸಭೆ ಸಮಾರಂಭಗಳಲ್ಲಿ ಸಮಾಜಿಕ ಅಂತರ ಪಾಲಿಸದಿರುವುದು ಮತ್ತು ಮಾಸ್ಕ್ ಧರಿಸದವರ ವಿರುದ್ದ ಕ್ರಮ ಕೈಗೊಳ್ಳಲು ಮಾರ್ಷಲ್ ಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಜಿಲ್ಲಾ ಪರಿಣಿತ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರ್ಷಲ್ ಗಳು ಸಭೆ ನಡೆಯುವ ಸ್ಥಳಗಳಿಗೇ ಆಗಮಿಸಿ ದಂಡ ಸೇರಿದಂತೆ ಸದ್ರಿ ಕಟ್ಟಡದ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಸಿ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಇತ್ತ್ತಿಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುವಂತೆ ಕಂಡು ಬರುತ್ತಿದ್ದು, ಈ ಕುರಿತಂತೆ ಜಿಲ್ಲಾ ಪರಿಣಿತ ಸಲಹಾ ಸಮಿತಿ ಅಭಿಪ್ರಾಯದಂತೆ , ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಟ್ ಬಳಕೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ತಪ್ಪದೆ ಪಾಲಿಸುವಂತೆ ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳು ತೆರೆದಿದ್ದು, ಅಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆ ಕಂಡುಬರುತ್ತಿಲ್ಲ, ನಿಯಮ ಉಲ್ಲಂಘಿಸುವ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ನೀಡಬೇಕು. ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ವರದಿ ಇಲ್ಲದೇ ಆಗಮಿಸುವವರ ವಿರುದ್ದ ಎಪಿಡಮಿಕ್ ಕಾಯ್ದೆಯನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಹೊರ ದೇಶ ಮತ್ತು ರಾಜ್ಯದಿಂದ ಆಗಮಿಸುವವರ ವಿವರಗಳನ್ನು ಸಾರ್ವಜನಿಕರು ಸಮೀಪದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆವತಿಯಿಂದ ಕೋವಿಡ್ ಸೋಂಕಿತರ ಪ್ರಾಥಮಿಕ ವಿವರಗಳನ್ನು ಸಂಗ್ರಹಿಸಿ, ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಎಂದರು.
ಆರೋಗ್ಯ ಇಲಾಖೆಯಿಂದ ಪ್ರಸ್ತುತ ನಡೆಸುತ್ತಿರುವ ಪರೀಕ್ಷೆಯ ಸಂಖ್ಯೆಯಲ್ಲಿ ಹೆಚ್ಚು ಮಾಡಿ, ಪ್ರಾಥಮಿಕ ಸಂಪರ್ಕಿತರ ಕುರಿತು ಹೆಚ್ಚು ನಿಗಾವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ಹೇಳಿದರು.
ಸಭೆಯಲ್ಲಿ ಡಿಹೆಚ್‌ಓ ಡಾ.ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೋವಿಡ್ ವಿಶೇಷಾಧಿಕಾರಿ ಡಾ. ಪ್ರೇಮಾನಂದ ಹಾಗೂ ಆರೋಗ್ಯ ಇಲಖೆಯ ವಿವಿಧ ಅಧಿಕಾರಿಗಳು ಹಾಗೂ ಜಿಲ್ಲಾ ಪರಿಣಿತ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.