ಬಡತನ ನಿರ್ಮೂಲನೆಗೆ ಜಾಗೃತಿ, ಸಶಕ್ತೀಕರಣವೇ ಮಾರ್ಗ: ಡಾ. ರಾಧಾಕೃಷ್ಣ ಕೆ.
ಮಂಗಳೂರು, ಫೆಬ್ರವರಿ 11 2021: ವಿವಿ ಕಾಲೇಜು ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಹೊಸ ಬ್ಯಾಚ್‌ನ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರಥಬೀದಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ರಾಧಾಕೃಷ್ಣ ಕೆ , ಪ್ರಾಯೋಗಿಕವಾಗಿ ಬಡತನ ನಿರ್ಮೂಲನೆಗೆ ಜನರ ನಿರಾಸಕ್ತಿ, ಜಡತ್ವ, ನಿರ್ಲಕ್ಷ್ಯ ಇತ್ಯಾದಿಗಳನ್ನು ಹೋಗಲಾಡಿಸಬೇಕಾಗಿದೆ, ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಹೊಸ ಬ್ಯಾಚ್‌ನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು, ಪ್ರೊ. ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೋ ವಿರಚಿತ ನೊಬೆಲ್ ಪುರಸ್ಕೃತ ಕೃತಿ ʼಪುವರ್ ಎಕನಾಮಿಕ್ಸ್ʼ ಅನ್ನು ಉಲ್ಲೇಖಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಬಡತನ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ, ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಪ್ರಾಸ್ತಾವಿಕ ಮಾತುಗಳಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್, ಅರ್ಥಶಾಸ್ತ್ರ ಕೃತಿ ಪರಿಚಯ ಮಾಡಿಕೊಳ್ಳುವುದು ಮತ್ತು ಸಾಮಾನ್ಯ ಜ್ಞಾನ ವಿಸ್ತರಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂದರು.
ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಬಿ ಎಂ, ಶಮಾ ಐ ಎನ್ ಎಂ ಮತ್ತು ಆದರ್ಶ್ ಹೆಚ್ ಬಿ ಉಪಸ್ಥಿತರಿದ್ದರು.
ಎ ಎಸ್ ಪೂಜಾ ಸ್ವಾಗತಿಸಿ, ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು. ಸೋನಲ್ ರಾವ್ ಧನ್ಯವಾದ ಸಮರ್ಪಿಸಿದರು.