ಮೀನುಗಾರಿಕೆ ಬಂದರಿಗೆ ಬಾಲ ಕಾರ್ಮಿಕರ ಪ್ರವೇಶ ನಿಷೇಧಿಸಿ: ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ ಫೆಬ್ರವರಿ 8, 2021: ಜಿಲ್ಲೆಯ ಮಲ್ಪೆ ಸೇರಿದಂತೆ ವಿವಿಧ ಮೀನುಗಾರಿಕಾ ಬಂದರುಗಳ ಒಳಗೆ ಬಾಲ ಕಾರ್ಮಿಕರ ಪ್ರಕರಣಗಳು ಕಂಡುಬಂದ ನಿಟ್ಟಿನಲ್ಲಿ ಬಂದರಿನ ಪ್ರವೇಶ ದ್ವಾರದಲ್ಲೇ ಮಕ್ಕಳನ್ನು ತಡೆಯಬೇಕು. ಒಂದು ವೇಳೆ ಮಕ್ಕಳು ಬಂದರಿನ ಒಳಗೆ ಕಂಡು ಬಂದಲ್ಲಿ ಸಂಬಂಧಪಟ್ಟ ಬಂದರಿನ ಪ್ರವೇಶ ದ್ವಾರದವರಿಗೆ ನೋಟೀಸ್ ನೀಡಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರಿಕಾ ಬಂದರಲ್ಲಿ ಪದೇ ಪದೇ ಬಾಲ ಕಾರ್ಮಿಕರು ಪತ್ತೆಯಾಗುವುದು, ಮೀನು ಹೆಕ್ಕುವುದು ಮುಂತಾದ ಘಟನೆಗಳು ನಡೆಯುತ್ತಿದ್ದು, ಇದನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಪ್ರವೇಶ ದ್ವಾರದಲ್ಲೇ ಮಕ್ಕಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊರ ರಾಜ್ಯ, ಜಿಲ್ಲೆಗಳಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ಕೆಲಸ ಮಾಡುವ ಕ್ವಾರಿ, ಕ್ರಷರ್ಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿರುವ ಬಗ್ಗೆ ಅಗಿಂದಾಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಬಾಲ ಕಾರ್ಮಿಕರು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಿ ಮತ್ತು ಬಾಲಕಾರ್ಮಿಕ ನಿಷೇಧ ಕುರಿತಂತೆ ಎಲ್ಲಾ ಖಾಸಗಿ ಸಂಸ್ಥೆಗಳ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯಗಾರವನ್ನು ಏರ್ಪಡಿಸುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ ಸದಾಶಿವ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು