ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ
ಉಡುಪಿ ಫೆಬ್ರವರಿ 6, 2021: ಪ್ರಸಕ್ತ ಸಾಲಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ಸರ್ಕಾರ ಆದೇಶಿಸಿದೆ.
ಸಾಮಾನ್ಯ ಭತ್ತವನ್ನು ಕ್ವಿಂಟಾಲ್ಗೆ 1868 ರೂ. ಹಾಗೂ ಗ್ರೇಡ್ ಎ ಭತ್ತವನ್ನು ಕ್ವಿಂಟಾಲ್ಗೆ 1888 ರೂ. ದರದಲ್ಲಿ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 75 ಕ್ವಿಂಟಾಲ್ ಭತ್ತವನ್ನು ಖರೀದಿಸಲು ಹಾಗೂ ರೈತರ ನೋಂದಣಿಯೊಂದಿಗೆ ಭತ್ತದ ಖರೀದಿಯನ್ನು ತಕ್ಷಣದಿಂದಲೇ ಆರಂಭಿಸಿ, ಮಾರ್ಚ್ 7 ರ ವರೆಗೆ ಖರೀದಿ ಪ್ರಕ್ರಿಯೆಗೆ ನೊಂದಣಿಯನ್ನು ಮುಂದುವರೆಸಲು ಆದೇಶಿಸಲಾಗಿದೆ.
ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಮಂಗಳೂರನ್ನು ಸಂಗ್ರಹಣಾ ಏಜೆನ್ಸಿಗಳನ್ನಾಗಿ ನೇಮಿಸಿ, ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲು ತಿಳಿಸಲಾಗಿದೆ.
ಈ ಬಗ್ಗೆ ಸದರಿ ಸಂಸ್ಥೆಯಿಂದ ಅನ್ಲೈನ್ ವ್ಯವಸ್ಥೆ ಮಾಡಲಾಗಿದ್ದು, ಭತ್ತ ನೀಡಲು ಇಚ್ಛಿಸುವ ರೈತರು ಸಮೀಪದ ತಾಲೂಕಿನ ಭತ್ತ ಖರೀದಿ ಕೇಂದ್ರದಲ್ಲಿ (ಎಪಿಎಂಸಿ ಯಾರ್ಡ್) ತಮ್ಮ ಹೆಸರು ನೋಂದಣಿ ಮಾಡಬೇಕಿದ್ದು, ನೋಂದಣಿ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಪಡೆದಿರುವ ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಡಿ ನೋಂದಣಿಯಾಗಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ರೈತರ ನೊಂದಣಿ ಪ್ರಕ್ರಿಯೆಗೆ ಮಾರ್ಚ್ 7 ರ ವರಗೆ ಅವಧಿ ವಿಸ್ತರಿಸಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.