ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ: ಪೊನ್ನುರಾಜ್
ಮಂಗಳೂರು ಜ 03, 2021: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ವ್ಯವಸ್ಥಿತವಾಗಿ ಪೂರೈಕೆ ಮಾಡಲು ಕಾರ್ಯಪ್ರವೃತ್ತರಾಗಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ. ಪೊನ್ನುರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿವರ್ಷವು ಸಹ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ.
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ 24*7 ಅವಧಿಯಲ್ಲಿ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗುತ್ತಿದ್ದು, ದಿನಪೂರ್ತಿ ನೀರನ್ನು ಒದಗಿಸಲು ನೀರಿನ ಲಭ್ಯತೆಯನ್ನು ಕ್ರೋಢಿಕರಿಸುವ ಕೆಲಸವಾದಾಗ ಮಾತ್ರ ಈ ಯೋಜನೆಯ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 32,884 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದು 736 ಜನ ಮರಣ ಹೊಂದಿದ್ದಾರೆ.
ಮಂಗಳೂರು ನಗರದಲ್ಲಿಯೇ 18,819 ಪ್ರಕರಣಗಳಾಗಿ 381 ಜನ ಮರಣ ಹೊಂದಿದ್ದಾರೆ. ಕೇರಳ ರಾಜ್ಯದಿಂದ, ವಿದೇಶದಿಂದ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಜನರು ಬಂದು ಹೋಗುತ್ತಿರುವ ಹಿನ್ನೆಲೆ ಕೊರೋನಾ ಎರಡನೇ ಅಲೆ ಉಂಟಾಗುವ ಸಾಧ್ಯತೆಗಳು ಇವೆ.
ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ ಅವರು, ಕೋವಿಡ್ ಲಸಿಕೆಯನ್ನು ನೀಡಲು ಅಗತ್ಯವಿರುವ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ರಸ್ತೆ ಹೊರತಾಗಿ ಜನಸಾಮಾನ್ಯರಿಗೆ ಅವಶ್ಯವಿರುವ ಮೂಲ ಸೌಕರ್ಯ ಸೇರಿದಂತೆ ಮತ್ತಿತರ ಆಶೋತ್ತರಗಳ ಬಗ್ಗೆ ಮಾಹಿತಿ ಕಲೆಹಾಕಿ ಸರ್ಕಾರದಿಂದ ಅವುಗಳಿಗೆ ಎಲ್ಲಾ ರೀತಿಯಲ್ಲಿ ಸ್ಪಂದಿಸಿ ಇಲ್ಲಿನ ಜನರು ವಲಸೆ ಹೋಗದಂತೆ ತಡೆಯಲು ಮುಂದಾಗಬೇಕು ಎಂದರು.
ಮಂಗಳೂರು ನಗರವನ್ನು ಭಾರತದಲ್ಲಿಯೇ ಒಂದು ಸ್ವಚ್ಛ ನಗರ ಸ್ಥಾನ ಪಡೆಯುವ ರೀತಿಯಲ್ಲಿ ಸ್ವಚ್ಛ ನಗರವನ್ನಾಗಿಸಲು ಇಲ್ಲಿನ ಮಹಾನಗರ ಪಾಲಿಕೆಯು ಮುಂದಾಗಬೇಕು ಎಂದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.
ನಗರದ ಹೊರ ವಲಯದಲ್ಲಿ ಇಳಿಜಾರು ಪ್ರದೇಶಗಳನ್ನು ಸಮತಟ್ಟು ಮಾಡಿ ಮನೆಗಳನ್ನು ಕಟ್ಟಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ.
ಆ ಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಅಗತ್ಯವಾಗಿ ನೀರಿನ ಕಾಲುವೆಗಳನ್ನು ಹಾಗೂ ಚರಂಡಿಗಳನ್ನು ಮಾಲೀಕರು ನಿರ್ಮಿಸುವಂತೆ ನೋಡಿಕೊಳ್ಳಲು ಜವಬ್ದಾರಿಯನ್ನು ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಗಬೇಕು ಎಂದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಬೆಳೆ ಸಮೀಕ್ಷೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸೇರಿದಂತೆ ಇತರ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಸ್ಥಳೀಯವಾಗಿ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಕೆಲಸವಾಗಬೇಕು ಹಾಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಬರುವಂತಹ ಬೆಳೆಗಳನ್ನು ಬೆಳೆಯಲು ರೈತರಿಗೆ ನೆರವಾಗಬೇಕು ಎಂದರು.
ನಿವೇಶನ ಹಾಗೂ ವಸತಿ ರಹಿತರಿಗೆ ಲಭ್ಯತೆಯ ಆಧಾರದ ಮೇಲೆ ಅವರುಗಳಿಗೆ ನಿವೇಶನ ಹಾಗೂ ಮನೆ ನಿರ್ಮಾಣ ಮಾಡಿಕೊಡಬೇಕು ಎಂದ ಅವರು, ಜಮೀನಿನ ಪಹಣಿಯಲ್ಲಾಗಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸವಾಗಬೇಕೆಂದು ಸೂಚಿಸಿದರು.
ಪ್ರಸ್ತುತ ಸಾಲಿನ ಆಯವ್ಯಯದ ಯೋಜನೆ ಕಾರ್ಯಕ್ರಮಗಳಿಗೆ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಅಬಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಅಪರ ಜಿಲ್ಲಾಧಿಕಾರಿ ಎಂ. ಜೆ ರೂಪಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆರ್ ಸೆಲ್ವಮಣಿ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಲಂ ಹಾಗೂ ಇತರರು ಉಪಸ್ಥಿತರಿದ್ದರು.