ಪದ್ಯಾಣ ಗೋವಿಂದ ಭಟ್ಟರಿಗೆ “ಶ್ರೀ ಕದ್ರಿ” ಪ್ರಶಸ್ತಿ
ಮಂಗಳೂರು ಡಿಸೆಂಬರ್ 24, 2020: ಕಟೀಲು 5ನೇ ಮೇಳದ ಪ್ರಧಾನ ಭಾಗವತ ಪದ್ಯಾಣ ಗೋವಿಂದ ಭಟ್ ಅವರು “ಶ್ರೀ ಕದ್ರಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಿ.27ರಂದು ಸಂಜೆ ಕದ್ರಿ ದೇವಸ್ಥಾನ ಬಳಿಯ ಮಂಜುನಾಥ ಕಾಲನಿಯ ಶ್ರೀಕದ್ರಿ ಪ್ರಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮ್ಮುಖ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ತಿಳಿಸಿದ್ದಾರೆ.
ಪದ್ಯಾಣ ಗಣಪತಿ ಭಟ್- ಅದಿತಿ ಅಮ್ಮ ದಂಪತಿ ಪುತ್ರ 51 ವರ್ಷದ ಗೋವಿಂದ ಭಟ್ಟರು ಬಿ.ಕಾಮ್. ಪದವೀಧರ. 29 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಮಾಡುತ್ತಿದ್ದು, ಕಳೆದ 6 ವರ್ಷಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ. ಮಾಂಬಾಡಿ ಸುಬ್ರಹ್ಮಣ್ಯ ಭಾಗವತರ ಶಿಷ್ಯರಾದ ಗೋವಿಂದ ಭಟ್ಟರನ್ನು ಕುರಿಯ ಶಾಸ್ತ್ರಿ ಗಳು, ಬೊಟ್ಟಿಕೆರೆ ಪೂಂಜರು ತಿದ್ದಿ ತೀಡಿದ್ದಾರೆ.
ಏಕಾದಶ ಸಂಭ್ರಮ:ಇದೇ ಸಂದರ್ಭ ಕಟೀಲು ಮೇಳದ 11ನೇ ವರ್ಷದ ಸೇವೆಯಾಟ ಶ್ರೀದೇವಿ ಲಲಿತೋಪಖ್ಯಾನ ಡಿ.27ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಮಂಜುನಾಥ ಕಾಲನಿ ಆವರಣದಲ್ಲಿ ನಡೆಯಲಿದೆ ಎಂದು ಆಯೋಜಕ ಕುಂಜತ್ತೋಡಿ ವಾಸುದೇವ ಭಟ್ ತಿಳಿಸಿದ್ದಾರೆ.