ಕ್ರಿಸ್ಮಸ್, ಹೊಸ ವರ್ಷ ಆಚರಣೆಗೆ ಕೋವಿಡ್ ಮಾರ್ಗಸೂಚಿ ಪ್ರಕಟ
ಉಡುಪಿ, ಡಿ 21 2020: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್ ಮಸ್ ಮತ್ತು ಹೊಸವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ ಭಕ್ತಿಪೂರ್ವಕವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುವ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಮುಚ್ಚಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಆಯೋಜಿಸುವುದನ್ನು ನಿಷೇಧಿಸಿ, ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ಕ್ರೈಸ್ತ ಧರ್ಮದ ಚರ್ಚ್ ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮೇಲ್ವಿಚಾರಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
ಹಬ್ಬದ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ.
ಡಿಸೆಂಬರ್ 30 ರಿಂದ ಜನವರಿ 2 ರ ವರೆಗೆ ಕ್ಲಬ್ / ಪಬ್/ ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ-ಡಾನ್ಸ್ ಕಾರ್ಯಕ್ರಮ, ವಿಶೇಷ ಪಾರ್ಟಿ ಇತ್ಯಾದಿಗಳನ್ನು ನಿಷೇಧಿಸಲಾಗಿದ್ದು, ಕ್ಲಬ್ / ಪಬ್/ ರೆಸ್ಟೋರೆಂಟ್ಗಳನ್ನು
ಪ್ರತಿನಿತ್ಯದಂತೆ ತೆರೆದಿದ್ದು, ನಡೆಸಲು ನಿರ್ಬಂಧವಿಲ್ಲ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದ್ದು, ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ.
ಆಯ್ದ ರಸ್ತೆ ಸ್ಥಳಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಹುದು.
ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಅದರಂತೆ 65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೋಟೆಲ್/ ಮಾಲ್ / ಪಬ್/ ರೆಸ್ಟೋರೆಂಟ್ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಇರಿಸಬೇಕು.
ಹೋಟೆಲ್/ ಮಾಲ್ / ಪಬ್/ ರೆಸ್ಟೋರೆಂಟ್ಗಳ ಮಾಲೀಕರು, ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಕೋವಿಡ್- 19 ರ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಜನ ಸೇರುವಂತೆ ಜಾಗ್ರತೆ ವಹಿಸಬೇಕು.
ಅಗತ್ಯವಿದ್ದಲ್ಲಿ ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್ಲೈನ್ ಮುಖಾಂತರ / ಟೋಕನ್ ಪದ್ಧತಿಯಲ್ಲಿ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಕಲ್ಪಿಸಬೇಕು.
ಪ್ರಾಂಗಣದಲ್ಲಿ, ಉಪಹಾರ ಸ್ಥಳಗಳಲ್ಲಿ, ವ್ಯವಸ್ಥಿತ ಕಟ್ಟಡ ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.
ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಬೇಕು.
ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ / ಕಾರ್ಪೋರೇಷನ್ / ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ / ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಶಿಸ್ತಿನ / ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.