ಉಡುಪಿ ಜಿಲ್ಲೆಯಲ್ಲಿ ಜನವರಿ 1 ರಿಂದ ವಿದ್ಯಾಗಮ ಆರಂಭ

 ಉಡುಪಿ ಜಿಲ್ಲೆಯಲ್ಲಿ ಜನವರಿ 1 ರಿಂದ ವಿದ್ಯಾಗಮ ಆರಂಭ
Share this post

ಉಡುಪಿ, ಡಿಸೆಂಬರ್ 18, 2020: ಜಿಲ್ಲೆಯಲ್ಲಿ ಜನವರಿ 1 ರಿಂದ ಸರ್ಕಾರಿ / ಅನುದಾನಿತ / ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾಗಮ ಕಾರ್ಯಕ್ರಮದ ಎರಡನೇ ಹಂತ ಆರಂಭವಾಗಲಿದೆ.

ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಕ್ಕೆ ಮುನ್ನ ಶಾಲಾ ಆವರಣ ಮತ್ತು ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವಂತೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನಗರಸಭಾ / ಪುರಸಭಾ / ಪಟ್ಟಣ ಪಂಚಾಯತ್  ವ್ಯಾಪ್ತಿಯ ಶಾಲೆಗಳಿಗೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.

ವಿದ್ಯಾಗಮ ಪ್ರಾರಂಭದ ದಿನ ಶಾಲೆಗಳಲ್ಲಿ ಜಾಥಾ ನಡೆಸಿ, ಪೋಷಕರಲ್ಲಿ ಅರಿವು ಮೂಡಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದ್ದು,  ವಿದ್ಯಾಗಮ ಪ್ರಾರಂಭವಾಗುವ ಬಗ್ಗೆ ವಾಟ್ಸಾಪ್  ಮೂಲಕವೂ ಪೋಷಕರಿಗೆ ತಿಳುವಳಿಕೆ ನೀಡುವಂತೆ ಸೂಚಿಸಲಾಗಿದೆ.

ಪ್ರೌಢಶಾಲೆಗಳಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಪಾಳಿಯಲ್ಲಿ ಮೂರು ಅವಧಿಗಳನ್ನು, ಅಪರಾಹ್ನ ಪಾಳಿಗಳಲ್ಲಿ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ.

ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ನೇ ತರಗತಿ ಮಕ್ಕಳನ್ನು ಮತ್ತು 6 ರಿಂದ 8 ನೇ ತರಗತಿ ಮಕ್ಕಳನ್ನು ಪರ್ಯಾಯ ದಿನಗಳಂದು ಕರೆಸಿ, ವಿದ್ಯಾಗಮ ನಡೆಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 3 ನೇ ತರಗತಿ ಮಕ್ಕಳನ್ನು ಮತ್ತು 4 ರಿಂದ 5 ನೇ ತರಗತಿ ಮಕ್ಕಳನ್ನು ಪರ್ಯಾಯ ದಿನಗಳಂದು ಕರೆಸಿ, ವಿದ್ಯಾಗಮ ನಡೆಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.

ವಿದ್ಯಾಗಮ ಚಟುವಟಿಕೆಯನ್ನು ಶಾಲಾ ಆವರಣ, ಗ್ರಂಥಾಲಯಗಳಲ್ಲಿ ಆಯೋಜಿಸಲು ಸೂಚಿಸಲಾಗಿದ್ದು,  ಈ ಎಲ್ಲಾ ಸಂದರ್ಭಗಳಲ್ಲಿಯೂ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ ಭಟ್ ವೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!