ಹಾವೇರಿಯಿಂದ ಕಾಲ್ನಡಿಗೆಯಲ್ಲಿ ಧರ್ಮಸ್ಥಳ ಯಾತ್ರೆ ಕೈಗೊಂಡ 76ರ ವೃದ್ಧ!


ಬೆಳ್ತಂಗಡಿ, ಡಿಸೆಂಬರ್ 12, 2020: ಇವರಿಗೆ 76 ವರ್ಷ ಪ್ರಾಯ. ಆದರೆ ಯುವಕರನ್ನೂ ನಾಚಿಸುವಂತಹ ಉತ್ಸಾಹ. ಸದಾ ಲವಲವಿಕೆಯಿಂದ ಕೂಡಿರುವ ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ ಮಾಲತೇಶ ಗೊರಪಜ್ಜ ಈ ಬಾರಿ ಕೂಡಾ ಪಾದಯಾತ್ರೆ ಮೂಲಕ ಶನಿವಾರ ಧರ್ಮಸ್ಥಳ ತಲುಪಿದ್ದಾರೆ.
ರಾಜ್ಯದ ಹಲವೆಡೆಯಿಂದ ಪ್ರತಿ ವರ್ಷ ನೂರಾರು ಭಕ್ತರು ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಶ್ರೀ ದೇವರ ದರ್ಶನ ಪಡೆಯುತ್ತಾರೆ.
ಮಾಲತೇಶ ಅವರು ಕಳೆದ 40 ವರ್ಷಗಳಿಂದ ಪ್ರತಿವರ್ಷ ಲಕ್ಷ ದೀಪೋತ್ಸವಕ್ಕೆ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ.
ನವೆಂಬರ್ 17 ರಂದು ಅವರು ಹಾನಗಲ್‍ನಿಂದ ಪಾದಯಾತ್ರೆ ಪ್ರಾರಂಭಿಸಿ ದಿನಕ್ಕೆ 20 ಕಿ.ಮೀ. ದೂರ ಪ್ರಯಾಣಿಸಿ ಇಂದು ಧರ್ಮಸ್ಥಳ ತಲುಪಿದರು.
“ಪಾದಯಾತ್ರೆಯಲ್ಲಿ ನನಗೆ ಎಲ್ಲರೂ ಸಹಕಾರ ನೀಡುತ್ತಾರೆ. ಪಾದಯಾತ್ರೆಯಿಂದ ತನ್ನ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಿದೆ. ಮಾನಸಿಕ ನೆಮ್ಮದಿ, ಶಾಂತಿ, ಸಂತೋಷ ಸಿಕ್ಕಿದೆ,” ಎಂದು ಅಭಿಮಾನದಿಂದ ಹೇಳುತ್ತಾರೆ ಮಾಲತೇಶ ಗೊರಪಜ್ಜ.
76 ರ ವಯಸ್ಸಿನಲ್ಲಿ ಕೂಡಾ ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಮೂಲಕ ಬಂದ ಸಂತಸ ಅವರ ಕಣ್ಣಿನಲ್ಲಿ ಮಿಂಚುತ್ತಿತ್ತು.