ಮಧ್ಯವರ್ತಿಗಳ ಹಾವಳಿ ತಡೆಗೆ ‘ಅಫಿಡವಿಟ್ ಬೇಸ್ಡ್ ಕನ್ವರ್ಷನ್’ ತಂತ್ರಾಂಶ
ಕಾರವಾರ ಡಿಸೆಂಬರ್ 09: ಬಡ ರೈತರು ಮತ್ತು ಭೂ ಮಾಲಿಕರು ಭೂ ಪರಿವರ್ತನ ಸಮಯದಲ್ಲಿ ಕಛೇರಿಯಿಂದ ಕಛೇರಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಅವರನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಕಾಲಮಿತಿಯೊಳಗೆ ಭೂಪರಿವರ್ತನೆ ಆದೇಶ ನೀಡುವ ದೃಷ್ಟೀಯಿಂದ ಸರಕಾರವು ಅಫಿಡವಿಟ್ ಬೇಸ್ಡ್ ಕನ್ವರ್ಷನ್ (affidavit based conversion) ಎಂಬ ತಂತ್ರಾಂಶವನ್ನು ಜಾರಿಗೆ ತಂದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಅವರು ತಿಳಿಸಿದ್ದಾರೆ.
ಈ ತಂತ್ರಾಂಶದ ಅನ್ವಯ ಸಂಬಂಧಿಸಿದ ಎಲ್ಲಾ ಇಲಾಖೆಗಳು ತಮ್ಮ ಅಭಿಪ್ರಾಯವನ್ನು 30 ದಿನಗೊಳಗಾಗಿ ತಂತ್ರಾಂಶದಲ್ಲಿ ದಾಖಲಿಸುತ್ತವೆ. ಇಲಾಖೆಗಳು ದಾಖಲಿಸಿರುವ ಅಭಿಪ್ರಾಯವನ್ನು ಆಧರಿಸಿ 60 ದಿನಗೊಳಗಾಗಿ ಸಂಭಂದಿಸಿದ ಅರ್ಜಿದಾರರಿಗೆ ಭೂಪರಿವರ್ತನೆ ಆದೇಶವನ್ನು ಜಿಲ್ಲಾಧಿಕಾರಿ ನೀಡಬೇಕಾಗುತ್ತದೆ. ಈ ಕಾರ್ಯ ವಿಧಾನವು ಸಂಪೂರ್ಣವಾಗಿ ದಾಖಲೆಗಳ, ಇಲಾಖೆಯ ಅಭಿಪ್ರಾಯ ಮತ್ತು ತಂತ್ರಾಜ್ಞಾನ ಆಧಾರಿತವಾಗಿದ್ದು ಎಲ್ಲಿಯೂ ಮಾನವ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.
ದೋಷಮುಕ್ತ ಭೂಪರಿವರ್ತನೆ ಆದೇಶ ನೀಡುವ ದೃಷ್ಟೀಯಿಂದ ಅರ್ಜಿದಾರನು ಅರ್ಜಿ ಸಲ್ಲಿಸುವಾಗ ಭೂಪರಿವರ್ತನಾ ಪೂರ್ವ ನಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ತ ಪಡಿಸಲು ಕಾಲಮಿತಿಯನ್ನು 60 ದಿನದಿಂದ 30 ದಿನಗಳಿಗೆ ಕಡಿಮೆಗೊಳಿಸಲಾಗಿದೆ. ಹೀಗೆ ಸಾರ್ವಜನಿಕರಿಗೆ ದೋಷಮುಕ್ತ ಮತ್ತು ಕ್ಷೀಪ್ರಗತಿಯಲ್ಲಿ ಭೂಪರಿವರ್ತನೆ ಆದೇಶ ನೀಡುವ ದೃಷ್ಟೀಯಿಂದ ತಂತ್ರಾಂಶದಲ್ಲಿ ಹೆಚ್ಚಿನ ಸುಧಾರಣೆ ತರಲು ಸತತವಾಗಿ ಸರಕಾರವು ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೆಲವು ಇಲಾಖೆಗಳು ಅವೈಜ್ಞಾನಿಕ ಕಾರಣಗಳನ್ನು ನೀಡಿ ಭೂಪರಿವರ್ತನಾ ಪ್ರಕರಣ ತಿರಸ್ಕರಿಸುವುದರಿಂದ ಬಡ ರೈತರಿಗೆ ಮತ್ತು ಭೂ ಮಾಲಿಕರಿಗೆ ಅನಾನುಕೂಲತೆ ಉಂಟಾಗಿ ಅವರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೊರೆಹೊಗುವ ಸಂದರ್ಭ ಉಂಟಾಗುತ್ತದೆ. ಇಂತಹ ಸನ್ನಿವೇಶಗಳನ್ನುತಡೆಗಟ್ಟುವ ದೃಷ್ಟಿಯಿಂದ affidavit based conversion ತಂತ್ರಾಂಶದಲ್ಲಿ ಪ್ರತ್ಯೇಕ ಲಾಗಿನ್ ಹೊಂದಿದ ಎಲ್ಲ ಇಲಾಖೆಯ ಮುಖ್ಯಸ್ಥರು ತಮ್ಮ ಅಭಿಪ್ರಾಯವನ್ನು 15 ದಿನದೊಳಗಾಗಿ ದಾಖಲಿಸಬೇಕು ಎಂದರು.
ಒಂದುವೇಳೆ ಪ್ರತಿಕೂಲ ಅಭಿಪ್ರಾಯವಿದ್ದಲ್ಲಿ ಅದಕ್ಕೆ ಸಮಜಾಯಿಷಿ ನೀಡಬೇಕೇಂದು ಸುತ್ತೋಲೆ ಮತ್ತು ಪತ್ರಗಳ ಮುಖಾಂತರ ಸಂಬಂಧಿಸಿದ ಅಧಿಕಾರಿ/ ಸಿಬ್ಬಂದಿಗೆ ಮಾರ್ಗಸೂಚಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.