ತೋಟಗಾರಿಕಾ ಬೆಳೆಯಲ್ಲಿ ಸಸ್ಯ ಜನ್ಯ ಕೀಟನಾಶಕ ಬಳಕೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

 ತೋಟಗಾರಿಕಾ ಬೆಳೆಯಲ್ಲಿ ಸಸ್ಯ ಜನ್ಯ ಕೀಟನಾಶಕ ಬಳಕೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ
Share this post

ಚಿಕ್ಕಮಗಳೂರು.ಡಿ.೦೨:  ಸಸ್ಯ ಜನ್ಯ ಕೀಟನಾಶಕಗಳು ಪರಿಸರ, ಪರತಂತ್ರ ಮತ್ತು ಪರಭಕ್ಷಕ ಜೀವಿಗಳ ಮೇಲೆ ಯಾವುದೇ ತರಹದ ತೊಂದರೆಯನ್ನುಂಟು ಮಾಡದೆ ಉತ್ತಮವಾಗಿ ಕೀಟಗಳನ್ನು ಹತೋಟಿಯಲ್ಲಿಡಲು ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿ ಸರಳ ರೀತಿಯಲ್ಲಿ ತಯಾರಿಸಲು ಅನುಕೂಲಕರವಾಗಿದೆ.

ಬೇರೆ ಬೇರೆ ಸಸ್ಯ ಜನ್ಯ ಭಾಗಗಳು (ಎಲೆ, ಬೀಜ, ಎಣ್ಣೆ, ತೊಗಟೆ) ಕೀಟನಾಶಕ ಗುಣಗಳನ್ನು ಹೊಂದಿವೆ. ಈ ಭಾಗಗಳನ್ನು ಬಳಸಿ ತಯಾರಿಸಿದ ಕೀಟ ನಿರ್ವಹಣಾ ಪದಾರ್ಥಗಳಿಗೆ ಸಸ್ಯ ಜನ್ಯ ಕೀಟನಾಶಕಗಳೆಂದು ಕರೆಯುತ್ತಾರೆ.

ಬೇವಿನ ಬೀಜದ ಕಷಾಯ:
೧೨ ಕಿ.ಗ್ರಾಂ ಬೇವಿನ ಬೀಜವನ್ನು ಸಿಪ್ಪೆ ತೆಗೆದು ಸಣ್ಣದಾಗಿ ಪುಡಿ ಮಾಡಿ ೨೪ ಗಂಟೆಗಳ ಕಾಲ ೧೦ ಲೀ. ನೀರಿನಲ್ಲಿ ನೆನೆಸಿ ನಂತರ ರಸವನ್ನು ಸೋಸಿ ೨೦೦ ಲೀ. ನೀರಿಗೆ ಮತ್ತು ೨೦೦ ಗ್ರಾಂ ಸೋಪಿನ ಪುಡಿಯೊಂದಿಗೆ ಬೆರಸಿ ಸಿಂಪಡಿಸುವುದರಿಂದ ಕಾಯಿಕೊರಕ, ಎಲೆ ತಿನ್ನುವ ಹಾಗೂ ಕೋಸಿನಲ್ಲಿ ಹಸಿರು ಹುಳು ಮುಂತಾದ ಕೀಟಗಳನ್ನು ಸಮರ್ಪಕವಾಗಿ ನಿಯಂತ್ರಿಸಬಹುದು.

ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ:
೧/೨ ಕಿ.ಗ್ರಾಂ ಬೆಳ್ಳುಳ್ಳಿ ರಸವನ್ನು ೨೦೦ ಮಿ.ಲೀ ಸೀಮೆ ಎಣ್ಣೆಯೊಂದಿಗೆ ಬೆರಸಿ ೨೪ ಗಂಟೆಗಳ ಕಾಲ ಇಡಬೇಕು. ನಂತರ ರುಬ್ಬಿದ ೫ ಕಿ.ಗ್ರಾಂ ಹಸಿಮೆಣಸಿನಕಾಯಿ ರಸದೊಂದಿಗೆ ಮಿಶ್ರ ಮಾಡಬೇಕು. ಕಷಾಯದ ಸಾಮರ್ಥ್ಯ ಹೆಚ್ಚಿಸಲು ೨೦೦ ಗ್ರಾಂ ಸೋಪಿನ ಪುಡಿಯನ್ನು ಹಾಕಿ ಕಲಕಬೇಕು. ಈ ರೀತಿ ತಯಾರಿಸಿದ ದ್ರಾವಣವನ್ನು ೧೦೦ ಲೀ. ನೀರಿನಲ್ಲಿ ಬೆರೆಸಿ ಕೀಟ ಬಾಧೆ ಇರುವ ಒಂದು ಎಕರೆ ಪ್ರದೇಶಕ್ಕೆ ಸಿಂಪಡಿಸಬಹುದು. ಈ ರೀತಿ ಮಾಡುವುದರಿಂದ ಕೀಟಗಳ ಹಾವಳಿಯನ್ನು ಸಮರ್ಪಕವಾಗಿ ಹತೋಟಿ ಮಾಡಬಹುದು.

ಸಸ್ಯಜನ್ಯ ಎಣ್ಣೆಗಳ ಬಳಕೆ;
ಬೇವಿನ ಎಣ್ಣೆ/ ಹೊಂಗೆ ಎಣ್ಣೆ/ ಮೀನಿನ ಎಣ್ಣೆ (೭ ಮೀ.ಲೀ/ಲೀ) ಹಾಗೂ ರೆಸಿನ್ ಸೋಪು (೭ ಗ್ರಾಂ/ಲೀ) ಬಳಕೆಯಿಂದ ಸಸ್ಯಹೇನು, ಬಿಳಿನೊಣ, ಹಿಟ್ಟು ತಿಗಣೆ, ನುಸಿ, ಜಿಗಿಹುಳು ಮುಂತಾದ ಕೀಟಗಳನ್ನು ಸಮರ್ಪಕವಾಗಿ ಹತೋಟಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್, ವಿಷಯ ತಜ್ಞ ಯಶವಂತ್ ಕುಮಾರ್ ದೂ.ಸಂ: ೦೮೨೬೨-೨೯೫೦೪೩, ೮೬೧೮೧೮೬೫೮೬ ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Also read:

Subscribe to our newsletter!

Other related posts

error: Content is protected !!