ಸುರಕ್ಷಾ ಕ್ರಮಗಳೊಂದಿಗೆ ನವೆಂಬರ್ 17 ರಿಂದ ಪದವಿ ತರಗತಿಗಳು ಆರಂಭ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ನ 12: ಉಡುಪಿ ಜಿಲ್ಲೆಯಲ್ಲಿ ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ ತರಗತಿಗಳನ್ನು, ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸರ್ಕಾರಿ/ಖಾಸಗಿ/ ಅನುದಾನಿತ/ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು, ಪ್ರಮಾಣಿತ ಕಾರ್ಯಾಚರಣ ವಿಧಾನ ಮಾರ್ಗಸೂಚಿಯನ್ವಯ ಪ್ರಾರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗಧಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರದೊಂದಿಗೆ ಕಾಲೇಜಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು
ಜಿಲ್ಲಾಧಿಕಾರಿ ಜಿ.ಜಗದೀಶ್
ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗಧಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರದೊಂದಿಗೆ ಕಾಲೇಜಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾಲೇಜು ಆರಂಭದ ಕನಿಷ್ಠ 3 ದಿನಗಳ ಮುಂಚೆ ಎಲ್ಲಾ ಅಧ್ಯಾಪಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಪಡೆದಿರಬೆಕು, ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು, ಕಾಲೇಜುಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಧರಿಸಬೇಕು, ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಚಟುವಟಿಕೆಗಳನ್ನು ಆರಂಭಿಸುವAತಿಲ್ಲ, ಕೊಠಡಿಯಲ್ಲಿ ಸಾಮಾಜಿಕ ಅಂತರದಲ್ಲಿ ನಿಗಧಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಭೋದನೆ ಮಾಡಬೇಕು, ಅವಶ್ಯವಿದ್ದಲ್ಲಿ ಹೆಚ್ಚುವರಿ ಕೊಠಡಿ ಬಳಕೆ ಮಾಡಿಕೊಳ್ಳಬೇಕು, ಕಾಲೇಜಿನ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಥರ್ಮಲ್ ಸ್ಕಾö್ಯನರ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು, ಕಾಲೇಜಿನ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಗರಿಷ್ಠ ಪ್ರಮಾಣದಲ್ಲಿ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಕಾಲೇಜಿನಲ್ಲಿ ಕೋವಿಡ್ ನಿಯಂತ್ರಣ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಮೂಡಿಸುವ ಬ್ಯಾನರ್ ಮತ್ತು ಫಲಕಗಳನ್ನು ಅಳವಡಿಸಬೇಕು. ಕೋವಿಡ್ ನಿಯಂತ್ರಣ ಕುರಿತಂತೆ ಪಾಲಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಚನ ಪಡೆಯಬೇಕು. ಪ್ರತೀ ಕಾಲೇಜಿನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆ ರಚಿಸಿ, ನಿಗಧಿತವಾಗಿ ಸಭೆಗಳನ್ನು ನಡೆಸಿ, ಸುರಕ್ಷತಾ ಕ್ರಮಗಳಲ್ಲಿ ಲೋಪವಾಗದಂತೆ ಪರಿಶೀಲಿಸಬೇಕು. ಜಿಲ್ಲಾ ಕಾರ್ಯಪಡೆಯ ಮೂಲಕ ಕಾಲೇಜುಗಳಿಗೆ ಭೇಟಿ ನೀಡಿ, ಕೈಗೊಂಡಿರುವ ಸುರಕ್ಷಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಲೋಪಗಳು ಕಂಡುಬಂದಲ್ಲಿ ಸಂಬಂದಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಬಸ್ಸಿನ ಕೊರತೆಯಿದ್ದಲ್ಲಿ, ಯಾವ ರೂಟ್‌ಗಳಲ್ಲಿ ಬಸ್‌ನ ಕೊರತೆ ಇದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಲ್ಲಿ, ಆ ರೂಟಿನಲ್ಲಿ ಹೆಚ್ಚುವರಿಯಾಗಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು, ಎಲ್ಲಾ ಕಾಲೇಜುಗಳಿಗೆ ಕೋವಿಡ್ ಸುರಕ್ಷತಾ ದೃಷ್ಠಿಯಿಂದ ಅಗತ್ಯ ಉಪಕರಣಗಳನ್ನು ಒಳಗೊಂಡ ಪ್ರಥಮ ಚಿಕಿತ್ಶಾ ಕಿಟ್‌ಗಳನ್ನು ಒದಗಿಸುವಂತೆ ಡಿ.ಹೆಚ್.ಓ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾಲೇಜಿಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಪಠ್ಯಗಳನ್ನು ಆನ್‌ಲೈನ್ ಮೂಲಕ ದೊರೆಯುವಂತೆ ವ್ಯವಸ್ಥೆ ಮಾಡಬೇಕು, ವಿದ್ಯಾರ್ಥಿಗಳು ಮನೆಯಿಂದಲೇ ಊಟ ಮತ್ತು ಕುಡಿಯುವ ನೀರು ತಂದು ಬಳಸಬೇಕು, ತಮ್ಮ ವಸ್ತುಗಳನ್ನು ಇತರೆ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳದಿರುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ವಿದ್ಯಾರ್ಥಿಯಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಕಾಲೇಜು ವತಿಯಿಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ, ಪರೀಕ್ಷೆ ಮಾಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಡಿಹೆಚ್‌ಓ ಡಾ.ಸುದೀರ್ ಚಂದ್ರ ಸೂಡಾ ಹಾಗೂ ಜಿಲ್ಲೆಯ ವಿವಿಧ ಸರ್ಕಾರಿ/ಖಾಸಗಿ/ ಅನುದಾನಿತ/ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.