ಬೆಂಬಲ ಬೆಲೆಯಡಿಯಲ್ಲಿ ಭತ್ತ ಖರೀದಿ:ಜಿಲ್ಲಾಧಿಕಾರಿ
ಮಂಗಳೂರು ನ 12 : ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಭತ್ತ ಖರೀದಿಯನ್ನು ಮಾಡಲು ಅಗತ್ಯವಿರುವ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ತಮ್ಮ ಕಛೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕನಿಷ್ಟ ಬೆಂಬಲ ಯೋಜನೆ ಕಾರ್ಯಚರಣೆಗೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಂದ ಕನಿಷ್ಟ ಬೆಂಬಲ ಯೋಜನೆಯಡಿ ಸಾಮಾನ್ಯ ಭತ್ತವನ್ನು 1868 ರೂ.ಗಳಲ್ಲಿ ಹಾಗೂ ಗೇಡ್-1 ಭತ್ತಗಳನ್ನು1888 ರೂ.ಗಳಲ್ಲಿ ಖರೀದಿಸಲಾಗುವುದು ಎಂದರು.
ಕೃಷಿ ಇಲಾಖೆ ವತಿಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆಯನ್ನು ಆಧಾರಿಸಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರು ನೋಂದಾಣಿ ಮಾಡದಂತಹಾ ರೈತರಿಂದ ಭತ್ತವನ್ನು ಸರಕಾರವು ನಿಗಧಿಪಡಿಸಿರುವ ಅಕ್ಕಿ ಗಿರಣಿಗಳ ಮೂಲಕ ಖರೀದಿಸಲಾಗುವುದು ಎಂದರು.
ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿಸಲು ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಸಂಗ್ರಹಣಾ ಮಂಡಳಿ ಏಜೆನ್ಸಿಯನ್ನಾಗಿ ನೇಮಿಸಲಾಗಿದ್ದು, ರೈತರು ಖರೀದಿ ಕೇಂದ್ರಗಳಿಗೆ ಬಂದು ಅಲ್ಲಿಯೇ ಆನ್ಲೈನ್ನಲ್ಲಿ ನೋಂದಣಿ ಮಾಡಬೇಕೆಂದರು.
ಪ್ರತಿದಿನ ಖರೀದಿಸುವ ಕೃಷಿ ಉತ್ಪನ್ನಗಳ ವಿವರಗಳನ್ನು ಖರೀದಿ ಏಜೆನ್ಸಿ ಪತ್ರದಲ್ಲಿ ನೀಡಿರುವ ವಹಿಯಲ್ಲಿ ದಾಖಲಿಸಬೇಕು, ಗುಣಮಟ್ಟ ಪರಿಶೀಲನೆ ಹೆಸರಿನಲ್ಲಿ ರೈತರಿಗೆ ಯಾವುದೇ ಅನಾನೂಕುಲವಾಗದಂತೆ ನೋಡಿಕೊಳ್ಳಬೇಕು ಎಂದ ಅವರು ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಇಲಾಖೆಯ ಉಪನಿರ್ದೇಶಕಿ ಕುಮಾರಿ ರಮ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಎ.ಪಿ.ಎಂ.ಸಿಯ ಉಪನಿರ್ದೇಶಕಿ ರಾಣಿ, ಕೆ.ಎಫ್.ಸಿ.ಸಿ ಶರತ್ ಉಪಸ್ಥಿತರಿದ್ದರು.