ಸ್ಥಳೀಯ ಭಕ್ತರಿಗೆ ಶ್ರೀಕೃಷ್ಣ ದರ್ಶನ ಪಡೆಯಲು “ಸುದರ್ಶನ”
ಉಡುಪಿ, ಅ 11: ಶ್ರೀಕೃಷ್ಣ ಮಠದಲ್ಲಿ, ಸ್ಥಳೀಯ ಭಕ್ತರಿಗೆ ಸುಲಲಿತವಾಗಿ ಶ್ರೀಕೃಷ್ಣ ದರ್ಶನ ಪಡೆಯಲು ಪರ್ಯಾಯ ಶ್ರೀ ಅದಮಾರು ಮಠದಿಂದ ವ್ಯವಸ್ಥೆ ಮಾಡಿರುವ “ಸುದರ್ಶನ” ಹೆಸರಿನ ಪಾಸನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಾಂಕೇತಿಕವಾಗಿ ಚಾಲನೆ ನೀಡಿದರು.
ಶ್ರೀ ಮಠದಲ್ಲಿ ನಡಿಯುತ್ತಿರುವ ಪ್ರವಚನಗಳ ಮೂಲಕ ದೇವರ ಮಹಾತ್ಮೆಯನ್ನು ತಿಳಿದು ಕೊಂಡು ಸಾಧನೆ ಮಾಡುವುದು ರೀತಿಯಾದರೆ, ದೇವರ ದರ್ಶನದ ಮೂಲಕ ದೇವರನ್ನು ಕಣ್ಣು ತುಂಬಿಕೊಂಡು ಭಗವಂತನ ರೂಪವನ್ನು ಅನುಸಂಧಾನ ಮಾಡಿಕೊಳ್ಳುವುದೂ ವಿಶೇಷವಾದ ಭಕ್ತಿ ಎಂದು ಶ್ರೀಗಳು ಹೇಳಿದರು
ಸ್ಥಳೀಯ ಭಕ್ತರಿಗೆ ಮಠದ ಸಂಪ್ರದಾಯಗಳು ಗೊತ್ತಿರುವುದರಿಂದ ಸುಲಭದಲ್ಲಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ, ಈ ಕಾರ್ಡಿನಲ್ಲಿ ತಮ್ಮ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳಿರುವುದರಿಂದ ವಿಶೇಷ ಸಂದರ್ಭದಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗುವುದರಿಂದ ಹಾಗೂ ಶ್ರೀ ಮಠದ ರಕ್ಷಣೆಯ ಸಲುವಾಗಿ ಈ ಕಾರ್ಡನ್ನು ವಿತರಣೆ ಮಾಡುತ್ತಿದ್ದೇವೆ ಇದರಿಂದ ಕೃಷ್ಣ ಭಕ್ತರಿಗೆ ಅನುಕೂಲವಾಗಲಿ ಎಂದರು.
ಪ್ರಸ್ತುತ ಮದ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದು ಈ ಅವಧಿಯಲ್ಲಿ ಪರ್ಯಾಯ ಮಠದ ಸೂಚನೆ ಹಾಗೂ ನಿರ್ಣಯದಂತೆ ಮಠದ ದಕ್ಷಿಣದಲ್ಲಿರುವ ಮಹಾದ್ವಾರದ ಸಮೀಪ ಹಾಗೂ ಉತ್ತರ ದ್ವಾರದ ಮೂಲಕ ಪಾಸ್ ಇದ್ದ ಭಕ್ತರು ಪ್ರವೇಶ ಮಾಡಬಹುದು ಎಂದು ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದರು.