ಜಾತಿ ಧರ್ಮ ಎಲ್ಲೆಮೀರಿ ವಿಶ್ವವ್ಯಾಪಿಸಿದೆ ಯೋಗ : ಡಾ. ಕಲ್ಲಡ್ಕ ಪ್ರಭಾಕರ ಭಟ್
ಮಂಗಳೂರು, ಅ 05: ‘ಜಗತ್ತಿನ ಎಲ್ಲಾ ರಾಷ್ಟ್ರಗಳು ಯೋಗವನ್ನಾಶ್ರಮಿಸಿದೆ. ಅಷ್ಟಾಂಗ ಯೋಗದ ಮುಖೇನ ವಿಶ್ವ ಶಾಂತಿಯ ಪಾಠವನ್ನು ವಿಶ್ವಕ್ಕೆ ಭೋಧಿಸುವ ಶ್ರೇಷ್ಠ ಭಾರತದಲ್ಲಿ ಜನಿಸಿರುವ ನಾವೇ ಧನ್ಯರು. ಮನೆ ಮನೆ ಮನೆಗಳಲ್ಲಿ ನಮ್ಮ ಹಿರಿಯರು ಮಾಡುತ್ತಿದ್ದ ಸಂಸ್ಕಾರಯುತ ನಿತ್ಯ ಕರ್ಮಗಳಲ್ಲಿ ಯೋಗ ಅಡಗಿದೆ ’ಎಂದು ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷರಾಗಿರುವ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಧೀ ಶಕ್ತಿ ಜ್ಞಾನ ಯೋಗ ಇವರ ವತಿಯಿಂದ ಹತ್ತು ದಿನದ ‘’ ಯೋಗಾಯನೊ’’ ದ ಸಮರೋಪ ಸಮಾರಂಭವನ್ನು ಅಕಾಡೆಮಿಯ ಸಿರಿ ಚಾವಡಿಯಲ್ಲಿ ಉದ್ಘಾಟಿಸಿ ಯೋಗಗುರು ಶ್ರೀ ಸುರೇಂದ್ರ ಇವರನ್ನು ಸನ್ಮಾನಿಸಿ ಮಾತನಾಡಿದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಆನಂದ ಶೆಟ್ಟಿ ಯೋಗಾಯನ್ನಕ್ಕವಕಾಶವನ್ನಿತ್ತ ಅಕಾಡೆಮಿಯನ್ನು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ನಿರ್ವಹಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ಸಾರ್ ಮಾತನಾಡಿದರು.
‘ಮನುಷ್ಯರ ಆದಿದೈವಿಕ,ಆದಿಭೌತಿಕ, ಆಧ್ಯಾತ್ಮಿಕ ವಿಕಾಸಕ್ಕೆ ಅಷ್ಟಾಂಗಯೋಗ ಪೂರಕ. ಯೋಗಿವರೇನ್ಯರು ಕ್ರಾಂತದರ್ಶಿಗಳು ಸ್ಥೂಲರೂಪದ ಸುದೃಡ ಸಮಾಜ ನಿರ್ಮಾಣದ ಸಾಧ್ಯತೆಯನ್ನು ಸೂಕ್ಷ್ಮರೂಪದಲ್ಲಿ ನೀಡಿರುತ್ತಾರೆ. ಅದನ್ನು ವಿಸ್ತರಿಸಿ ತಿಳಿದು ತಿಳಿಸುವ ಕಾರ್ಯವನ್ನು ಈ ಯೋಗಾಯನ ಕಾರ್ಯಕ್ರಮ ಸಾಧಿಸಿ ತೋರಿಸುತ್ತದೆ’ ಎಂದು ಅವರು ಹೇಳಿದರು.
ರಾಜ್‍ಗೋಪಾಲ್ ರೈ ಸ್ವಾಗತಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಅಧ್ಯಕ್ಷರಾದ ಪ್ರಕಾಶ್ ಚಂದ್ರ ವಂದಿಸಿದರು.