ನಿಜವಾಗಿಯೂ ರೈತಪರ ಕಾನೂನೇ?

 ನಿಜವಾಗಿಯೂ ರೈತಪರ ಕಾನೂನೇ?
Share this post

ನಾನು ರೈತರ ಪರ

ಇದೀಗ ಎಪಿಎಮ್ ಸಿ ಕಾನೂನಿಗೆ ತಿದ್ದುಪಡಿ ಮತ್ತು ಕರ್ನಾಟಕ ಭೂ ಮಸೂದೆ ಕಾಯ್ದೆ ತಿದ್ದುಪಡಿ ಆಗಿದೆ. ಪರ ವಿರೋಧ ಸಂವಾದ ಹೋರಾಟ ನಡೆದಿದೆ.

ಈಗ
೧. ಎ ಪಿ ಎಮ್ ಸಿ ಯಲ್ಲಿನ ದಲ್ಲಾಳಿಗಳು ರೈತರನ್ನ ಶೋಷಣೆ ಮಾಡಲಾಗುತ್ತಿದೆ. ಅದನ್ನ ತಪ್ಪಿಸಲು ಕಾಯ್ದೆಯಲ್ಲಿ ತಿದ್ದುಪಡಿ. ಇದು ಮೂಲಭೂತ ಕಾರಣ.

ಹಾಗಾದರೆ ಇನ್ನು ಮುಂದೆ ರೈತರು ಎಲ್ಲಿ ಬೇಕಾದರೂ ಮಾರಬಹುದು. ಸಂತೋಷ.


ಆದರೆ ಎಲ್ಲ ರೈತರೂ ನೇರವಾಗಿ ಗ್ರಾಹಕರಿಗೆ ಮಾರಲು ಸಾಧ್ಯವಿಲ್ಲವಲ್ಲ. ಹಾಗಾದಾಗ ಆತ ಎಪಿಎಂಸಿ ಹೊರಗೆ ಯಾವುದೋ ಮಧ್ಯವರ್ತಿ ದಲ್ಲಾಳಿಯ ಬಳಿಗೇ ಹೋಗಬೇಕು. ಅಂದರೆ ಬೇರೆ ಹೆಸರಿನ ದಲ್ಲಾಳಿ. ಆತ ಎನು ಪುಗ್ಸಟ್ಟೆ ವ್ಯವಹಾರ ಮಾಡುತ್ತಾನೋ ಇಲ್ಲವಲ್ಲ. ಮತ್ತೆ ಹೊಸ ರೂಪದ ದಲ್ಲಾಳಿ ವ್ಯವಸ್ಥೆಯೊಳಗೆ ಬಂದಾಯಿತು. ಬರಲೇಬೇಕು.

ರೈತ ತನಗೆ ಹೆಚ್ಚಿನ ಬೆಲೆ ಕೊಡುವವರ ಬಳಿ ಹೋಗುವ ಅವಕಾಶವಿದೆಯಲ್ಲ. ಸತ್ಯ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ರೈತ ಅದರಲ್ಲೂ ಸಣ್ಣ ಹಿಡುವಳಿದಾರ ತನ್ನ ಅಲ್ಪ ಸ್ವಲ್ಪ ಬೆಳೆ ಯಾರಿಗೆ ಮಾರುವುದು… ?ಯಾರು ಹೆಚ್ಚಿನ ಬೆಲೆ ಕೊಡುತ್ತಾರೆ?

ಇತ್ಯಾದಿ ಸಂಗತಿಗಳನ್ನು ಪ್ರತಿಬಾರಿಯೂ ಅರ್ಥ ಮಾಡಿಕೊಂಡು, ಅಂತವರನ್ನು ಹುಡುಕಿಕೊಂಡು ಹೋಗಬೇಕು. ಇದು ವಾಸ್ತವದಲ್ಲಿ ಎಷ್ಟು ಸಾಧ್ಯ ಅನ್ನುವುದನ್ನು ನೀವೇ ಉಹಿಸಿಕೊಳ್ಳಿ. ಅಂತಹ ಸಣ್ಣ ರೈತರೆ ಶೇ ೭೦ ರಷ್ಟು ಇರುವುದು. ಆಗ ಇನ್ನೊಂದು ಪಾತ್ರ ವೇದಿಕೆ ಪ್ರವೇಶಿಸುತ್ತದೆ.

ನಾನು ನಿಮಗೆ ಒಂದು ಬೆಲೆ ಕೊಡ್ತೇನೆ. ಎಲ್ಲರದ್ದೂ ಸೇರಿಸಿ ನಾನು ದೊಡ್ಡ ಖರೀದಿದಾರನಿಗೆ ಮಾರುತ್ತೇನೆ. ನಿಮಗೆ ಯಾವ ತಲೆ ಬಿಸಿ ಬೇಡ ಎಂದು ಸಣ್ಣ ರೈತರ ಬೆಳೆ ಖರೀದಿಸಿ ದೊಡ್ಡ ವ್ಯಾಪಾರಿಗಳಿಗೆ ಮಾರುತ್ತಾರೆ.

ಇಲ್ಲಿ ರೈತ ನನ್ನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಂದದ್ದು ಬರಲಿ ಅಂತಾ ಬಲಿಯಾಗುತ್ತಾರೆ.
ಇದು ಕಾನೂನಿನ ಆಚೆಗಿನ ವಾಸ್ತವ. ಇನ್ನು ಎಪಿಎಂಸಿ ಮಧ್ಯವರ್ತಿಗಳು ವಂಚನೆ ಮಾಡುತ್ತಾರೆ ಅಂತಾ ಕಾನೂನು ತಂದಿದ್ದರೆ, ಹೊಸತಾಗಿ ಹುಟ್ಟುವ ಮಧ್ಯವರ್ತಿಗಳ ನಿಯಂತ್ರಣ ಹೇಗೆ ಅನ್ನುವುದು ಹೊಸ ಕಾನೂನಿನಲ್ಲಿ ಅಡಕವಾಗಿಲ್ಲ. ಇನ್ನು ದೊಡ್ಡ ದೊಡ್ಡ ಕಂಪೆನಿಗಳ ಜೊತೆ ಒಪ್ಪಂದ,ತದನಂತರದ ತಕರಾರುಗಳಲ್ಲಿ ಜಯ ಯಾರಿಗೆ ಇರಬಹುದು ಅದೂ ನಿಮ್ಮ ಉಹೆಗೆ ಬಿಡುವೆ.

ಇಲ್ಲಿ ಬಟಾಟೆ ನೀರುಳ್ಳಿ ಧವಸ ಧಾನ್ಯಗಳನ್ನು ಅವಶ್ಯಕ ಸಾಮಗ್ರಿಗಳ ಪಟ್ಟಿಯಿಂದ ಹೊರಗೆ ಇಟ್ಟಿರುವುದು ಯಾಕೋ..

ಯಾವ ವ್ಯಾಪಾರಿ ಎಷ್ಟು ಬೇಕಾದರೂ ಆಕ್ರಮ ಸಂಗ್ರಹ ಮಾಡಬಹದು. ಅದರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವ ನಿಯಮ ಅನ್ವಯವಾಗುತ್ತದೆ.

ಇನ್ನು ೪೫೦೦ ಕ್ಕೂ ಹೆಚ್ಚು ಎಪಿಎಂಸಿ, ೧೫೦೦ ಕ್ಕೂ ಹೆಚ್ಚು ಯಾರ್ಡ್ ಗಳಿವೆ. ಸಾವಿರಾರು ಎಕರೆ ಭೂಮಿ, ಕೋಟ್ಯಾಂತರ ಮೊತ್ತದ ಕಟ್ಟಡ, ವ್ಯಾಪಕ ಗೊಡೌನ್ ಇದೆ. ಅದನ್ನು ಎನು ಮಾಡುವುದು. ಈ ಹೊಸ ನಿಯಮದ ಪ್ರಕಾರ ಎಪಿಎಂಸಿ ಇನ್ನು ಹಲ್ಲಿಲ್ಲದ, ಕಿವಿ ಕಣ್ಣು ಕಿತ್ತ ಶರೀರ ಅಷ್ಟೆ.

ಅದಕ್ಕೆ ಬರುವ ಆದಾಯ ಅಲ್ಲಿನ ಸಿಬ್ಬಂದಿಗಳಿಗೆ ಸಂಬಳಕೊಡಲೂ ಸಾಧ್ಯವಿಲ್ಲ. ಇಷ್ಟಾಗ್ಯೂ ಇದರ ಆಡಳಿತ ಸಮಿತಿಯಲ್ಲಿ ೧೧ ಜನ ಕೃಷಿಕರೇ ಇರುವುದು. ಸೂಕ್ಷ್ಮವಾಗಿ ದಲ್ಲಾಳಿ ನಿಯಂತ್ರಣ ಮತ್ತು ರೈತರಿಗೆ ನ್ಯಾಯಯುತ ಬೆಲೆ ಕೊಡಲು ಒಂದು ವ್ಯವಸ್ಥೆಯನ್ನೇ ನಾಶ ಮಾಡಬೇಕಾ. ಕೋಟಿ ಕೋಟಿ ಬೆಲೆ ಬಾಳುವ ಎಪಿಎಂಸಿ ಆಸ್ತಿ ಪಳೆಯುಳಿಕೆಗಳಾಗುವುದು ದುರಂತ.

ಇನ್ನು ಭೂ ಮಸೂದೆ ಕಾಯಿದೆ. ೫ ಜನರ ಕುಟುಂಬ ೫೬ ಎಕರೆಗಿಂತ ಹೆಚ್ಚು ಖರೀದಿಸುವಂತಿಲ್ಲ.
ಎಸ್ ಸಿ ಎಸ್ ಟಿ ಜನರ ಭೂಮಿ ಖರೀದಿಸುವಂತಿಲ್ಲ. ನೀರಾವರೀ ಭೂಮಿ ಕೈಗಾರಿಕೆಗಳಿಗೆ ಕೊಡುವಂತಿಲ್ಲ.

ನಗರ ಪ್ರದೇಶಗಳು ಅಭಿವೃದ್ಧಿ ಆದ ಕಥೆಗಳನ್ನ ನೆನಪಿಸಿಕೊಳ್ಳಿ. ಎಲ್ಲವೂ ಕೃಷಿ ಭೂಮಿ ಆಗಿತ್ತು. ಹಸಿರುವಲಯವನ್ನ ವಾಣಿಜ್ಯ ವಲಯವನ್ನಾಗಿ ವಸತಿ ವಲಯವನ್ನಾಗಿ ಅಂದರೆ zone ಬದಲಾವಣೆ ಮಾಡಿ ಅದನ್ನ ಕನ್ವರ್ಷನ್ ಮಾಡಿ ಕೃಷಿ ಭೂಮಿಯನ್ನೇ ಬಳಸಿದ್ದು. ಇದನ್ನ ಈ ವ್ಯಾಪಾರಿ ಮತ್ತು ಅಧಿಕಾರಿಗಳಿಗೆ ನಾವು ಹೇಳಿಕೊಡಬೇಕಾ. ಪರಿಣಾಮ ಉಹಿಸಿಕೊಳ್ಳೋಣ.

ಹಳೆಯ ವ್ಯವಸ್ಥೆಯಲ್ಲಿನ ದೋಷ ನಿವಾರಣೆಗೆ ಹೊಸ ಕಾನೂನು. ಆದರೆ ಹೊಸ ಕಾನೂನಿ ನಂತರ ಉದ್ಭವಿಸುವ ದೋಷ ನಿಯಂತ್ರಣಕ್ಕೆ ಯಾವ ನಿಯಮಗಳೂ ಇಲ್ಲ.

ಇನ್ನು ಇದನ್ನು ವಿರೋಧಿಸುವವರು ರೈತರೇ ಅಲ್ಲ ಭಯೋತ್ಪಾದಕರು, ಗಂಜಿ ಗಿರಾಕಿಗಳು ಇತ್ಯಾದಿ. ಇದನ್ನು ಇತ್ತೀಚಿಗೆ ೩ ದಿನಗಳ ಕಾಲ ಸಂಘ ಪರಿವಾರದ ಸಭೆಯಲ್ಲಿ ಸಂಘದ ಕೃಷಿ ಘಟಕ ವಿರೋಧಿಸಿದೆ ಮತ್ತು ಈ ಹೋರಾಟದಲ್ಲಿ ಭಾಗವಹಿಸಿದೆ. ಈ ಸಭೆಯಲ್ಲಿ ಶ್ರೀ ಮೋಹನ ಭಾಗವತ ಕೂಡಾ ಇದ್ದರು.

ಗ್ರಾಮ ಮತ್ತು ಕೃಷಿ ಭಾರತದ ಅಸ್ಮಿತೆ. ಕೊರೊನಾ ಬಂದಾಗ ನಗರಗಳು ನಡುಗಿ ಹೋದವು. ಇನ್ನೂ ಕೂಡಾ ಮೇಲೆ ಏಳಲಾಗದೆ ಒದ್ದಾಡುತ್ತಿವೆ. ಆದರೆ ಹಳ್ಳಿಗಳು ತಮ್ಮ ಸ್ವಾವಲಂಬನೆಯ ಬದುಕಿನಿಂದಾಗಿ ಬಚಾವಾಗಿದೆ. ಸಂಪೂರ್ಣ ಯಾಂತ್ರಿಕ ಆಧುನಿಕತೆಯ ಬದುಕು ಮತ್ತು ಹಳ್ಳಿಯ ಜೀವನದ ನಡುವಿನ ಅಗಾಧತೆಯ ಸೂಕ್ಷ್ಮ ಗಳ ಪಾಠವನ್ನು ಕೊರೊನಾ ಕಲಿಸಿದೆ. ಹಳ್ಳಿಗಳು ಹಳ್ಳಿಗಳಾಗೇ ಇರಬೇಕು. ನಗರದ ಕಪಿ ಮುಷ್ಠಿಯಲ್ಲಿ ಹಳ್ಳಿಗಳು ಸಿಕ್ಕಿಕೊಂಡರೆ ನಗರ ನೆಲ ಕಚ್ಚಿದಾಗಲೆಲ್ಲ ಆಶ್ರಯ ತಾಣವಾಗುವ ಹಳ್ಳಿಗಳು ಅಸಹಾಯಕವಾಗುತ್ತವೆ.

ಮಧ್ಯವರ್ತಿಗಳ ನಿಯಂತ್ರಣ ಮಾಡಿ. ಎಪಿಎಂಸಿ ಉಳಿಸಿ. ಮುಕ್ತ ಮಾರುಕಟ್ಟೆ ಘೋಷಣೆ ಆದರೆ ಸಾಲದು. ಆ ಹೊಸತಾದ ಬಲೆಯಲ್ಲಿ ರೈತ ಸಿಕ್ಕಿ ಹಾಕಿಕೊಳ್ಳದಂತೆ ಕಾನೂನು ಮಾಡಿ.
ಸಾಧ್ಯವಾದರೆ ಪ್ರತಿ ಬೆಳೆಗೂ ಕನಿಷ್ಠ ಮತ್ತು ಗರಿಷ್ಠ ಮಾರಾಟ ಬೆಲೆ ನಿಗದಿ ಮಾಡಲಿ.


ಎಂ ಜಿ ಹೆಗಡೆ
ಸಾಮಾಜಿಕ ಕಾರ್ಯಕರ್ತ
ಮಂಗಳೂರು

Subscribe to our newsletter!

Other related posts

error: Content is protected !!