ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಖಾತೆ ತೆರೆಯುವ ಅಭಿಯಾನ
ಮಂಗಳೂರು, ಸೆ 23: ಭಾರತೀಯ ಅಂಚೆ, ಮಂಗಳೂರು ಹಾಗೂ ಪುತ್ತೂರು ವಿಭಾಗಗಳಿಂದ ಸೆ 29 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆಯುವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯದ್ಯಂತ ಹಮ್ಮಿಕೊಳ್ಳಲಾಗಿದೆ.
ಖಾತೆ ತೆರೆಯಲು ಆಧಾರ್ ಸಂಖ್ಯೆ, ಮೊಬೈಲ್ ಫೋನ್ ನಂಬರ್ ಹಾಗೂ ಪ್ರಾರಂಭಿಕ ಶುಲ್ಕ ರೂಪಾಯಿ 100 ಸಾಕು
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಸೇವೆಗಳು ಭಾರತದಾದ್ಯಂತ 1,55,531 ಅಂಚೆ ಕಛೇರಿಗಳಲ್ಲಿ ಲಭ್ಯವಿದೆ. ಅಂಚೆಯಣ್ಣನ ಮೂಲಕವೂ ಮನೆ ಬಾಗಿಲಿನಲ್ಲಿ ಈ ಸೇವೆಗಳು ಲಭ್ಯವಿದೆ.
ಸಾರ್ವಜನಿಕರಿಗೂ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಖಾತೆಯನ್ನು ತೆರೆಯಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು ಸಂಪೂರ್ಣ ಕಾಗದ ರಹಿತವಾಗಿದ್ದು ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿಲ್ಲ ಎಂದು ಶ್ರೀ ಹರ್ಷ ಎನ್, ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರುತಿಳಿಸಿದ್ದಾರೆ.
ಖಾತೆ ತೆರೆಯಲು ಆಧಾರ್ ಸಂಖ್ಯೆ, ಮೊಬೈಲ್ ಫೋನ್ ನಂಬರ್ ಹಾಗೂ ಪ್ರಾರಂಭಿಕ ಶುಲ್ಕ ರೂಪಾಯಿ 100 ಅಷ್ಟೇ ಸಾಕು.
ಈ ಖಾತೆ ತೆರೆದರೆ ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿ.ಟಿ.ಎಚ್ ರೀಚಾರ್ಜ್ ಮೊಬೈಲ್ ರೀಚಾರ್ಜ್ ಗಳನ್ನು ಮಾಡಬಹುದು.
ಇತರ ಬ್ಯಾಂಕ್ ಗಳಿಗೆ ದಿನದ 24 ಗಂಟೆಯೂ ಹಣ ಕಳುಹಿಸಬಹುದು ಹಾಗೂ ಬೇರೆ ಬ್ಯಾಂಕ್ ಗಳಿಂದ ಹಣವನ್ನು ಈ ಖಾತೆಗೆ ತರಸಿಕೊಳ್ಳಲೂ ಬಹುದು. ಅಂಚೆ ಉಳಿತಾಯ ಖಾತೆಯೊಂದಿಗೆ ಜೋಡಿಸಿ, ಅದಕ್ಕೆ ಹಣ ಹಾಕುವ ಅಥವಾ ಅದರಿಂದ ಹಣ ತೆಗೆಯುವ ಸೌಲಭ್ಯವೂ ಲಭ್ಯವಿದೆ.
ಅಂಚೆ ಕಚೇರಿಯ ಆರ್. ಡಿ, ಪಿ.ಪಿ.ಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮಾ ಮಾಡಬಹುದು. ಸರದಿಯ ವೇತನ, ವಿಧವಾ ವೇತನ ಇತ್ಯಾದಿಗಳನ್ನು ಅರ್ಹ ಫಲಾನುಭವಿಗಳು ಪಡೆಯಬಹುದು.
ಆಧಾರ್ ಸೀಡಿಂಗ್ ಸಮಸ್ಯೆಯಿಂದಾಗಿ ವಿವಿಧ ಯೋಜನೆಗಳ ಮೊತ್ತ ಪಡೆಯಲು ಅನಾನುಕೂಲ ಹೊಂದಿದವರು, ಐ.ಪಿ.ಪಿ.ಬಿ ಖಾತೆಯನ್ನು ಆಧಾರ್ ಸೀಡಿಂಗ್ ಮಾಡುವುದರೊಂದಿಗೆ ತೆರೆಯಬಹುದು. ಕ್ಯೂಆರ್ ಕಾರ್ಡನ್ನು ಉಚಿತವಾಗಿ ನೀಡಲಾಗುವುದು.
ಸೆ 29 ರಂದು ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಸಮೀಪದ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಅಂಚೆಯಣ್ಣನ ಮೂಲಕ ಈ ಖಾತೆಗಳನ್ನು ತೆರೆದು ಈ ಮೂಲಕ ಡಿಜಿಟಲ್ ಬ್ಯಾಂಕಿನ ಸೌಲಭ್ಯಗಳನ್ನು ಅತ್ಯಂತ ಸರಳವಾಗಿ ಮನೆಯಂಗಳದಲ್ಲೇ ಪಡೆದುಕೊಳ್ಳಬೇಕಾಗಿ ಹಿರಿಯ ಅಂಚೆ ಅಧೀಕ್ಷಕರು ವಿನಂತಿಸಿದ್ದಾರೆ.
ಇದನ್ನೂ ಓದಿ: ಕೋರೋನಾ ವೈರಸ್– ಮಾರ್ಗಸೂಚಿ ಪಾಲನೆ ಕಡ್ಡಾಯ -ಜಿಲ್ಲಾಧಿಕಾರಿ ಆದೇಶ