ಉತ್ತರ ಕನ್ನಡ: ಅದ್ಬುತ ಯಶಸ್ಸು ಕಂಡ ಇ- ಮೇಗಾ ಲೋಕ್ ಅದಾಲತ್
ಕಾರವಾರ ಸೆ. 19 : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ಬನ್ನಿ ರಾಜಿ ಸಂಧಾನ ಮಾಡೋಣಾ’ ಎನ್ನುವ ಘೋಷವಾಖ್ಯದೊಂದಿಗೆ ಶನಿವಾರ ಜಿಲ್ಲೆಯ 22 ಬೆಂಚ್ಗಳಲ್ಲಿ ಆನ್ಲೈನ್ ಇ-ಲೋಕ್ ಅದಾಲತ್ ಹಮ್ಮಿಕೊಂಡು 1,482 ಪ್ರಕರಣಗಳನ್ನು ರಾಜಿಸಂಧಾನ ಮಾಡುವ ಮೂಲಕ ಅದ್ಬುತ್ ಯಶಸ್ಸು ಸಾಧಿಸಿತು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಹುದಾದಂತಹ ಅಪರಾಧಿಕ, ಚೆಕ್ ಬೌನ್ಸ್, ಮೋಟಾರ್ ವಾಹನ ಅಪಘಾತ ಪರಿಹಾರ, ವೈವಾಹಿಕ/ಕೌಟುಂಬಿಕ, ಸಿವಿಲ್ ಪ್ರಕರಣಗಳು ಸೇರಿದಂತೆ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಇ-ಲೋಕ್ ಅದಾಲತ್ ಮೂಲಕ ಇತ್ಯರ್ಥಗೊಳಿಸುವದಕ್ಕಾಗಿ 3,885 ಪ್ರಕರಣಗಳನ್ನು ಜಿಲ್ಲಾ ನ್ಯಾಲಯವು ರೆಫರ್ ಮಾಡಿತ್ತು.
ಇದರಲ್ಲಿ 1,482 ವಿವಿಧ ಕೇಸಗಳಿಗೆ ಸಂಬಂದಿಸಿದಂತೆ 4 ಕೊಟಿ 94 ಲಕ್ಷದ 43 ಸಾವಿರದ 790 ರೂ. ಪರಿಹಾರ ಧನವನ್ನು ರಾಜಿಸಂಧಾನದ ಮೂಲಕ ನೀಡುವಂತೆ ಮಾಡಿ ಬಗೆಹರಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯದ ಮಾರ್ಗಸೂಚಿ ಮತ್ತು ಸರಕಾರದ ನಿಯಮಾವಳಿಗಳನ್ನು ಪಾಲಿಸಿ ವಿಡಿಯೋ ಕಾನ್ಪರೆನ್ಸ್ ಮತ್ತು ಕಾನ್ಪರೆನ್ಸ್ ಕಾಲ್ ಮಾಡುವ ಮೂಲಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿಪುಲಾ ಎಮ್. ಪೂಜಾರ ಅವರು ಆನ್ಲೈನ್ ರಾಜಿಸಂಧಾನವನ್ನು ನಡೆಸಿಕೊಟ್ಟರು.
ಜಿಲ್ಲಾ ನ್ಯಾಯಾಲಯ ಸೇರಿದಂತೆ ತಾಲೂಕು ನ್ಯಾಯಾಲಯಗಳಲ್ಲಿ ಇ-ಮೇಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಹೆಚ. ಚಂದ್ರಶೇಖರ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.