ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ
ಉಡುಪಿ, ಜೂನ್ 09, 2023: ಮೌಢ್ಯವನ್ನು ಪ್ರಶ್ನಿಸುವ ಮನೋಧರ್ಮವು ಯುವಜನರಲ್ಲಿ ಬೆಳೆಯಬೇಕಿದೆ. ವೈಜ್ಞಾನಿಕ ಚಿಂತನೆಗಳು ಮಾಡಬೇಕು. ಕುವೆಂಪು ಸಾಹಿತ್ಯ ಓದುಗರಲ್ಲಿ ಮಾನವೀಯತೆಯನ್ನು ಬಿತ್ತುತ್ತದೆ. ಅವರ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಡಾ. ಸುಧಾಕರ ದೇವಾಡಿಗ ಬಿ ನುಡಿದರು.
ಎಂ.ಜಿ.ಎಂ. ಕಾಲೇಜು ಉಡುಪಿಯ ಗೀತಾಂಜಲಿ ಸಭಾಂಗಣದಲ್ಲಿ ಎಸ್‌ಡಿಎಂ ಕಾಲೇಜು ಉಜಿರೆಯ ಕನ್ನಡ ವಿಭಾಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಸಹಯೋಗದೊಂದಿಗೆ ಜರುಗಿದ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ವಿಶೇಷೋಪನ್ಯಾಸ ಮಾಲೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕ್ ಮಾತನಾಡಿ ” ಕುವೆಂಪು ಒಬ್ಬ ವಿಶಿಷ್ಟ ವ್ಯಕ್ತಿ. ಅವರ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಆ ತತ್ವಗಳು ಸಾರ್ವತ್ರಿಕವಾಗಿದ್ದು, ಇಂದಿನ ಯುವ ಜನತೆಗೆ ಅದರ ಅವಶ್ಯಕತೆ ಇದೆ ” ಎಂದರು.
ಕುವೆಂಪು ಆದರ್ಶ ಮತ್ತು ವ್ಯಕ್ತಿತ್ವವನ್ನು ಮುಂದಿನ ತಲೆಮಾರಿಗೆ ರವಾನಿಸುವ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಹಲವಾರು ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಯುವ ತಲೆಮಾರಿಗೆ ಕುವೆಂಪು ವಿಚಾರಧಾರೆಗಳನ್ನು ತಲುಪಿಸುವ ದೃಷ್ಟಿಯಿಂದ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮ ಸಂಯೋಜಕ ಮತ್ತು ಎಸ್‌ಡಿಎಂ ಕಾಲೇಜು ಉಜಿರೆಯ ಕನ್ನಡ ಪ್ರಾಧ್ಯಾಪಕರಾದ ಡಾ.ರಾಜಶೇಖರ ಹಳೆಮನೆ ತಿಳಿಸಿದರು.
ಕಾರ್ಯಕ್ರಮವನ್ನು ಪ್ರಾಧ್ಯಾಪಕ ರಾಮಾಂಜಿ ನಿರೂಪಿಸಿದರು. ವಿದ್ಯಾರ್ಥಿನಿ ಸ್ವರ್ಣ ಸ್ವಾಗತಿಸಿ, ರಕ್ಷಿತಾ ಶೆಟ್ಟಿ ವಂದನಾರ್ಪಣೆ ಮಾಡಿದರು. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.