ಬೆಂಗಳೂರು ನಗರದಲ್ಲಿ ಮಳೆ ಹಾನಿ: ನಾಳೆ ಮಧ್ಯಾಹ್ನ ಮುಖ್ಯಮಂತ್ರಿ ಬೊಮ್ಮಾಯಿ ಸ್ಥಳ ಪರಿಶೀಲನೆ
ಬೆಂಗಳೂರು, ಆಗಸ್ಟ್ 31, 2022: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರದಲ್ಲಿ ಹಾನಿಗೀಡಾದ ಪ್ರದೇಶಗಳಿಗೆ
ನಾಳೆ ಮಧ್ಯಾಹ್ನ 3.30 ಗಂಟೆಗೆ ಭೇಟಿ ನೀಡಿ ,ಪರಿಶೀಲನೆ ಮಾಡಿ ಸ್ಥಳದಲ್ಲಿಯೇ ಅಗತ್ಯ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ತಿಳಿಸಿದರು.
ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳ ಕುರಿತು ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಬೆಂಗಳೂರು ನಗರದ ಬೊಮ್ಮನಹಳ್ಳಿ, ಮಹದೇವಪುರ ವಲಯಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಈ ಎರಡು ವಲಯಗಳಲ್ಲಿ ತೀವ್ರ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಲಾಗಿದೆ.
ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಯಾಗಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಬಹಳ ದೊಡ್ಡ ಪ್ರಮಾಣದ ಹಾನಿಯಾಗಿದೆ. ಓಆರ್ ಆರ್ ರಸ್ತೆಯಲ್ಲಿ ನೀರು ನಿಂತು, ಕೆಳಗಿನ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನವಸತಿಗೆ ತೊಂದರೆಯಾಗಿದೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ, ಮಹದೇವಪುರ ವಲಯದಲ್ಲಿ 9 ಕಡೆ, ಹಾಗೂ ಬೊಮ್ಮನಹಳ್ಳಿಯಲ್ಲಿ 11 ಕಡೆ ತೊಂದರೆಯಾಗಿದೆ.ಅಲ್ಲಿನ ಸವಳಕೆರೆ ತುಂಬಿ ಹರಿದಿದ್ದು, ಬಹಳ ಸಮಸ್ಯೆಯಾಗಿದೆ. ಓ.ಆರ್.ಆರ್. ರಸ್ತೆಯಾಗುವ ಹಂತದಲ್ಲಿ ಮುಖ್ಯ ಕಾಲುವೆ ಒಂದೆಡೆ ಕಟ್ಟಿಕೊಂಡಿದೆ. ನೀರು ನಿಲ್ಲಲು ಇರುವ ಎಲ್ಲಾ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದು, ಪೈಪ್ ಲೈನ್ ಅಳವಡಿಸಬೇಕು. ಹಾಗೂ ಓ.ಆರ್.ಆರ್ ರಸ್ತೆಯಲ್ಲಿ ನಿಂತಿತ್ತುವ ನೀರನ್ನು ಹೊರಚೆಲ್ಲಬೇಕೆಂದು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ಸೂಚಿಸಿದರು.
ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಅಲ್ಲಿ ಚರಂಡಿಗಳ ಮುಂದುವರಿಕೆ ಇಲ್ಲ. ಮುಖ್ಯ ಚರಂಡಿ ಬಡಾವಣೆಯಲ್ಲಿ ಬಂದು ನಿಂತಿದೆ. ಅದನ್ನೂ ಕೂಡ ತೆರವು ಮಾಡಿ ನೀರಿಗೆ ತನ್ನದೇ ಸಹಜ ಮಾರ್ಗಗಳನ್ನು ಸರಿ ಪಡಿಸಲು ಸೂಚಿಸಲಾಗಿದೆ ಎಂದರು.
ಬೊಮ್ಮನಹಳ್ಳಿಯಲ್ಲಿಯೂ ಕೆಲಸ ಪ್ರಾರಂಭವಾಗಿದ್ದು, ನೀರು ನಿಂತಿರುವಲ್ಲಿ ನೀರು ಹೊರಹಾಕಲು ಸೂಚಿಸಲಾಗಿದೆ. 125 ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ವರಿಗೆ ಪರಿಹಾರ ನೀಡಲು ಕಂದಾಯ ಸಚಿವರು ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದರು.
1500 ಕೋಟಿ ರೂ.ಗಳನ್ನು ರಾಜ ಕಾಲುವೆ ನಿರ್ಮಾಣ ಕಾರ್ಯಕ್ಕೆ ನೀಡಿದ್ದು, ಅವುಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಗಳು ಪ್ರಾರಂಭವಾಗಬೇಕು. ಕಳೆದ 6 ತಿಂಗಳಿಂದ ನಿರಂತರವಾಗಿ ಮಳೆ ಬಂದದ್ದರಿಂದ ಸಮಸ್ಯೆಯಾಗಿದೆ. ಕಳೆದ 3 ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ತಿಂಗಳು ಹಾಗೂ ಈ ವಾರ ಅತಿ ಹೆಚ್ವು ಮಳೆಯಾಗಿದ್ದರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿವೆ. ತುಂಬಿರುವ ನೀರು ಹಾಗೂ ಮಳೆ ನೀರು ಇಷ್ಟು ಅನಾಹುತಕ್ಕೆ ಕಾರಣವಾಗಿದೆ. ಹಿಂದೆಂದೂ ಈ ಪರಿಸ್ಥಿತಿ ಇರಲಿಲ್ಲ. ಕಳೆದ ಬಾರಿ ಯಲಹಂಕ, ಮಲ್ಲೇಶ್ವರಂ ಭಾಗದಲ್ಲಿ ಆಗಿದ್ದ ತೊಂದರೆ ಸರಿಪಡಿಸಿದ್ದರಿಂದ ಈ ಬಾರಿ ಸಮಸ್ಯೆಯಾಗಿಲ್ಲ. ಹಿಂದೆ ಈ ಭಾಗದಲ್ಲಿ ಕೆರೆಗಳು ತುಂಬಿದ್ದರಿಂದ ಸಮಸ್ಯೆಯಾಗಿದೆ. ಬರುವ ದಿನಗಳಲ್ಲಿ ಎಲ್ಲಾ ಅಡೆತಡೆ ನಿವಾರಿಸಲು ಸೂಚನೆ ನೀಡಲಾಗಿದೆ ಎಂದರು.
ಹೆಚ್ಚುವರಿ ಅನುದಾನ ಅಗತ್ಯವಿದ್ದರೆ, ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ನಾಳೆ ಪರೀಕ್ಷೆ ಮಾಡಿ ಸ್ಥಳದಲ್ಲಿಯೇ ಸೂಚನೆ ನೀಡಲಾಗುವುದು. ಯಲಹಂಕದಲ್ಲಿ ಕೆಲಸ ಮಾಡಿದ್ದರಿಂದ ಈ ಬಾರಿ ತೊಂದರೆಯಾಗಿಲ್ಲ. ಕೆ.ಆರ್.ಪುರಂ ನಲ್ಲಿ ರೈಲ್ವೆ ಅನುಮತಿ ಪಡೆದು ಟೆಂಡರ್ ಕರೆದು ಕೆಲಸ ಪ್ರಾರಂಭವಾಗುತ್ತಿದೆ. ಹೊಸಕೆರೆಹಳ್ಳಿಯಲ್ಲಿಯೂ ಕೆಲಸ ಪ್ರಾರಂಭವಾಗಿದೆ. ಆಡಳಿತಾತ್ಮಕ ಅನುಮೋಡನೆಗಳನ್ನು ನೀಡಿ, ಅನುದಾನ ಬಿಡುಗಡೆಯೂ ಆಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬೆಳ್ಳಂದೂರು ಇಕೊಸ್ಪೇಸ್ ಹಾಗೂ ಆರ್ಎಂಝಡ್ ಪ್ರದೇಶದಲ್ಲಿ ನೀರು ಸಂಗ್ರಹವನ್ನು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು. ತುರ್ತಾಗಿ ನೀರು ಸಂಗ್ರಹವಾಗಿರುವುದನ್ನು ತೆರವುಗೊಳಿಸಿ. ರೇನ್ಬೋ ಲೇಔಟ್ ನಲ್ಲಿ ನೀರು ತೆಗೆದು, ಮಳೆನೀರುಗಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿಸಲಾಗಿದೆ ಎಂದರು.
ಎಲ್ಲ ವಲಯಗಳ ಜಂಟಿ ಆಯುಕ್ತರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಜಲಮಂಡಳಿ, ಬೆಸ್ಕಾಂ ನೊಂದಿಗೆ ಸಮನ್ವಯ ವಹಿಸಿ ಕೆಲಸ ಮಾಡುವಂತೆ ಸೂಚಿಸಿದೆ ಎಂದರು.
ಮಳೆಯಾಗುತ್ತಿರುವ ಸಂದರ್ಭದಲ್ಲಿ ಸಂಚಾರ ಪೊಲೀಸರು ಸಕ್ರಿಯರಾಗಿ, ಸುಗಮ ಸಂಚಾರವನ್ನು ಖಾತರಿಪಡಿಸಬೇಕು. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದೆ ಎಂದು ತಿಳಿಸಿದರು.