ಹಳ್ಳಿಹಳ್ಳಿಯಲ್ಲೂ ಆರೋಗ್ಯ ಸೇವೆ ಸುಲಭವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ:ಡಾ. ಕೆ. ಸುಧಾಕರ್
ಬೆಂಗಳೂರು, ಏ 29, 2022: ಆಧುನಿಕ ಜಗತ್ತಿಗೆ ವೈದ್ಯರು ಒಗ್ಗಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ವೈದ್ಯರ ಕೆಲಸದಲ್ಲಿ ಧರ್ಮ, ಜಾತಿಯ ಭೇಧವಿಲ್ಲ. ಹಳ್ಳಿ ಹಳ್ಳಿಯಲ್ಲೂ ಆರೋಗ್ಯ ಸೇವೆ ಸುಲಭವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನ ಬಿಜಿಎಸ್ ಮೆಡಿಕಲ್ ಕಾಲೇಜಿನ ಮೂರನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವೈದ್ಯರು ತಪಾಸಣೆ ಅಥವಾ ಚಿಕಿತ್ಸೆಯ ವೇಳೆ ರೋಗಿಯ ಮತ್ತು ಅವರ ಸಂಬಂಧಿಕರ ಕಣ್ಣಿನಲ್ಲಿರುವ ಪ್ರೀತಿ ಅಥವಾ ಕಷ್ಟಗಳನ್ನು ಕಾಣುವಂತಗಬೇಕು. ಅವರ ಕಣ್ಣಿರು ಒರೆಸಿದರೆ ಅದುವೇ ನಿಮಗೆ ಆಶೀರ್ವಾದ ಎಂದು ಅಭಿಪ್ರಾಯ ಪಟ್ಟರು.
ಬಿಜಿಎಸ್ನ 150 ವೈದ್ಯ ವಿದ್ಯಾರ್ಥಿಗಳು ಇಂದಿನಿಂದ ಸಮಾಜದಲ್ಲಿ ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ಎಲ್ಲಾ ಸಮಯದಲ್ಲೂ ಸರ್ಕಾರ ಎಲ್ಲಾ ವೈದ್ಯರ ನೆರವಿಗೆ ನಿಲ್ಲಲಿದೆ. ವೈದ್ಯರಿಗೆ ಯಾರ ಭಯವೂ ಬೇಡ. ನಿಮ್ಮ ಕೆಲಸವನ್ನು ನೀವು ಬದ್ಧತೆ ಮತ್ತು ಶ್ರದ್ಧೆಯಿಂದ ಮಾಡಿ. ಸಮಾಜಕ್ಕೆ ಮಾದರಿ ಆಗುವಂತಹ ಕೆಲಸಗಳನ್ನು ಮಾಡಿ ಎಂದು ಹೇಳಿದರು
ಶಾಲಾ ಶಿಕ್ಷಕನ ಮಗನಾಗಿರುವ ನನಗೆ ವೈದ್ಯಕೀಯ ಎಷ್ಟು ದುಬಾರಿ ಅನ್ನುವುದರ ಅರಿವಿದೆ. ಉನ್ನತ ಶಿಕ್ಷಣದಲ್ಲಿ ವಿಶ್ವದಲ್ಲೇ ವೈದ್ಯಕೀಯ ಶಿಕ್ಷಣ ಎಲ್ಲಕ್ಕಿಂತ ದುಬಾರಿ . ಭಾರತ ಮಾತ್ರವಲ್ಲ, ವಿಶ್ವದ ಎಲ್ಲಾ ಕಡೆಯೂ ವೈದ್ಯಕೀಯ ಶಿಕ್ಷಣ ದುಬಾರಿ ಆಗಿದೆ. ಆದರೆ ಪೋಷಕರು ತ್ಯಾಗ, ಬದ್ಧತೆ ಮತ್ತು ಕನಸು ಇಟ್ಟುಕೊಂಡು ಮಕ್ಕಳನ್ನು ವೈದ್ಯರನ್ನಾಗಿ ಮಾಡುತ್ತಾರೆ. ತನ್ನ ಇತಿಹಾಸ ಅರಿತವನು ಹೊಸ ಇತಿಹಾಸ ಸೃಷ್ಟಿಸಬಲ್ಲನು ಅನ್ನುವ ಮಾತಿದೆ. ಇತಿಹಾಸದ ಮೂಲಕ ಭವಿಷ್ಯವಬನ್ನು ಕಟ್ಟ ಬಹುದು ಎಂದು ಹೇಳಿದರು.
ಎಂಬಿಬಿಎಸ್ ಪದವಿ ಪಡೆದ ಈ ಬ್ಯಾಚ್ ಸ್ಪೆಷಲ್ ಬ್ಯಾಚ್ ಆಗಿದೆ. 1918-1919ರ ನಂತರ ಮೊದಲ ಬಾರಿಗೆ ಸಾಂಕ್ರಾಮಿಕ ರೋಗ ಕೊರೊನಾ ಬಾಧಿಸಿತ್ತು. ಆಗಿನ ವೈದ್ಯಕೀಯ ವಿದ್ಯಾರ್ಥಿಗಳು ಸ್ಪಾನಿಷ್ ಫ್ಲೂ ವಿರುದ್ಧ ಹೋರಾಟ ಮಾಡುವ, ಕೆಲಸ ಮಾಡುವ ಅವಕಾಶ ಪಡೆದಿದ್ದರು. ಈಗ ಈ ಬ್ಯಾಚ್ ಗೆ ಕೊರೊನಾ ವಿರುದ್ಧ ಹೋರಾಟ ಮಾಡುವ ಅವಕಾಶ ಸಿಕ್ಕಿತ್ತು. ಕಲಿಕೆಯ ಜೊತೆ ಪ್ರಾಕ್ಟೀನ್ ಅನುಭವ ಸಿಕ್ಕಿದೆ. ವೈದ್ಯ ವೃತ್ತಿಯ ಆರಂಭದಲ್ಲಿ ಸಿಕ್ಕಿದ ಈ ಅನುಭವ ನಿಮ್ಮೆಲ್ಲರನ್ನು ಅತ್ಯುತ್ತಮ ವೈದ್ಯನಾಗಿ ಮಾಡಲಿದೆ ಎಂದು ಆಶಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 900 ಜನರಿಗೆ ಒಬ್ಬ ವೈದ್ಯ ಬೇಕಾಗುತ್ತದೆ. 2014ಕ್ಕೂ ಮೊದಲು 1300 ಜನಕ್ಕೆ ಒಬ್ಬ ವೈದ್ಯರ ಲಭ್ಯತೆ ಇತ್ತು. ಆದರೆ ಇವತ್ತು ಅಲೋಪಥಿಕ್, ಆಯುರ್ವೇದಮ ಯುನಾನಿ ಮತ್ತು ಯೋಗಿಕ್ ಸೈನ್ಸ್ ಸೇರಿಕೊಂಡು ಕರ್ನಾಟಕದಲ್ಲಿ 900 ಜನರಿಗೆ ಒಬ್ಬರ ವೈದ್ಯರ ಲಭ್ಯತೆ ಇದೆ. 2014ರಿಂದ ಬಿಜೆಪಿ ಸರ್ಕಾರ ದೇಶದ ಎಲ್ಲಾ ಕಡೆ ಸುಮಾರು 200ಕ್ಕೂ ಅಧಿಕ ಮೆಡಿಕಲ್ ಕಾಲೇಜುಗಳುನ್ನು ಆರಂಭಿಸಿದೆ. ಪ್ರತೀ ವರ್ಷ ಸುಮಾರು 65, 000ಕ್ಕೂ ಅಧಿಕ ಎಂಬಿಬಿಎಸ್ ವೈದ್ಯರು ಹಾಗೂ 30,000 ಸ್ನಾತಕೋತ್ತರ ವೈದ್ಯರು ಸಮಾಜ ಸೇವೆಗೆ ಸಿಗುತ್ತಿದ್ದಾರೆ. ಯಾರಿಗೂ ಮನುಷ್ಯನ ಜೀವನ ಅಥವಾ ಜೀವಂತ ಸಮಯವನ್ನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ವೈದ್ಯರಿಗೆ ಅದು ಸಾಧ್ಯವಿದೆ. ಹೀಗಾಗಿ ವೈದ್ಯರು ಎಲ್ಲರಿಗಿಂತಲೂ ವಿಭಿನ್ನ ಎಂದು ಹೇಳಿದರು.
ಹೆಣ್ಣುಮಕ್ಕಳು ಹೆಚ್ಚಾಗಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಮಹಿಳಾ ಸಬಲೀಕರಣದ ಹೆಜ್ಜೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಂಡ ಕನಸಿನ ನವ ಭಾರತವಾಗಿದೆ. ವೈದ್ಯಕೀಯ ಶಿಕ್ಷಣದ ಅಭಿವೃದ್ಧಿ ಇನಷ್ಟು ಆಗಬೇಕು. ವಿದೇಶಿ ವೈದ್ಯರು, ಶಿಕ್ಷಣ ಸಂಸ್ಥೆಗಳ ಜೊತೆ ಸ್ಪರ್ಧೆ ಮಾಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. ತಂತ್ರಜ್ಞಾನದ ಬಳಕೆ ಮತ್ತು ಹೊಸ ಹೊಸ ಸಂಶೋಧನೆಗಳ ಹೆಚ್ಚು ಆಗಬೇಕು ಎಂದು ತಿಳಿಸಿದರು.
ಕೊರೊನಾ ಬಳಿಕ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಬದಲಾವಣೆ ಆಗಿದೆ. 50 ವರ್ಷಗಳಲ್ಲಿ ಆಗದೇ ಇರುವುದು ಸಾಂಕ್ರಾಮಿಕ ರೋಗದ ಸಮಯದಲ್ಲಿ ಆಗಿದೆ. ,ಮೂಲ ಸೌಕರ್ಯದ ಅಭಿವೃದ್ಧಿಯಿಂದ ಹಿಡಿ ಎಲ್ಲವೂ ಈಗ ಲಭ್ಯವಿದೆ. ರಾಜ್ಯದಲ್ಲಿ 50,000 ಆಕ್ಸಿಜನ್ ಬೆಡ್ ಗಳಿವೆ. ಖಾಸಗಿಯಲ್ಲಿ 1 ಲಕ್ಷಕ್ಕೂ ಅಧಿಕ ಬೆಡ್ ಗಳಿವೆ. ಈ ಮೂಲ ಸೌಕರ್ಯಗಳ ಅಭಿವೃದ್ಧಿಯಿಂದಲೇ ಕೊರೊನಾವನ್ನು ಕಟ್ಟಿಹಾಕಲು ಸಾಧ್ಯವಾಯಿತು. ಕೊರೊನಾ ವೇಳೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ಕಳೆದ 1 ವರ್ಷದಲ್ಲಿ ಸರ್ಕಾರ 1750 ವೈದ್ಯರ ನೇಮಕ ಮಾಡಿದೆ. ಆದರೆ ಎಲ್ಲಾ ವೈದ್ಯರು ಹಳ್ಳಿಯಲ್ಲಿ ಕನಿಷ್ಠ 1 ವರ್ಷ ಸೇವೆ ಮಾಡಬೇಕು. ಹಳ್ಳಿ ಜನರಿಗೆ ಆರೋಗ್ಯ ವ್ಯವಸ್ಥೆಯ ಅವಶ್ಯಕತೆ ಇದೆ. ಹಳ್ಳಿ ಹಳ್ಳಿಯಲ್ಲಿ ಆರೋಗ್ಯ ಸೇವೆ ಸುಲಭವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.