ಕ್ರೀಡೆಯಿಂದ ಸೌಹಾರ್ದ ಮನೋಭಾವ ವೃದ್ಧಿ: ಡಾ.ವಿನಾಯಕ್ ಶೆಣೈ

 ಕ್ರೀಡೆಯಿಂದ ಸೌಹಾರ್ದ ಮನೋಭಾವ ವೃದ್ಧಿ: ಡಾ.ವಿನಾಯಕ್ ಶೆಣೈ

????????????????????????????????????

Share this post

ಉಡುಪಿ, ನ 24, 2021: ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತೀ ಅವಶ್ಯಕ. ಕ್ರೀಡೆಯಿಂದ ಆರೋಗ್ಯ ವೃದ್ಧಿಗೊಳ್ಳುವುದಲ್ಲದೆ ಮಾನಸಿಕವಾಗಿ ಶಕ್ತರಾಗುತ್ತೇವೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸೌಹಾರ್ದ ಮನೋಭಾವ ಬೆಳೆಯಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿನಾಯಕ್ ಶೆಣೈ ಹೇಳಿದರು.

ಅವರು ಇಂದು ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ, ಗೃಹರಕ್ಷಕ ದಳದ ವತಿಯಿಂದ ನಡೆದ, ಜಿಲ್ಲಾ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಗೃಹರಕ್ಷಕರು ದೇಶ ಸೇವೆ, ಸಮಾಜ ಸೇವೆಯಲ್ಲಿ ತಲ್ಲೀನರಾದಂತೆ, ಕ್ರೀಡಾ ಕ್ಷೇತ್ರದಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮುಂದೆ ಜಿಲ್ಲೆ, ರಾಜ್ಯ, ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದರು.

ದೇಶ ರಕ್ಷಣೆ ಮಾಡುವ ಸೇನೆ, ಆಂತರಿಕ ಭದ್ರತೆಯನ್ನು ಕಾಪಾಡುವ ಸಿ.ಆರ್.ಪಿ.ಎಫ್ ಹಾಗೂ ಸಮಾಜದ ರಕ್ಷಣೆ ಮಾಡುವ ಆರಕ್ಷಕ ದಳಕ್ಕೆ ಸರಿಸಾಟಿಯಾಗಿ ದೇಶದೆಲ್ಲೆಡೆ ಅಗತ್ಯಕ್ಕನುಗುಣವಾಗಿ ಚುನಾವಣಾ ಸಂದರ್ಭದಲ್ಲಿ, ಯಾವುದೇ ರೀತಿಯ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ, ಸರಕಾರದಿಂದ ಕರೆ ಬಂದಾಗ, ಯಾವುದನ್ನೂ ಲೆಕ್ಕಿಸದೆ ದೇಶ ಹಾಗೂ ಸಮಾಜ ಸೇವೆಯಲ್ಲಿ ತಮ್ಮ ಕರ್ತವ್ಯ ಪರಿಪೂರ್ಣವಾಗಿ ನಿರ್ವಹಿಸುವಂತಹ ಗೃಹರಕ್ಷಕರ ಸೇವೆ ಅತ್ಯಂತ ಶ್ಲಾಘನೀಯ. ಅವರಿಗೆ ಸರ್ಕಾರದಿಂದ ಹೆಚ್ಚಿನ ಸವಲತ್ತು, ಪ್ರೋತ್ಸಾಹ ದೊರೆಯಬೇಕು ಎಂದರು.

ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಕೆ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಏಳಿಗೆಗಾಗಿ ಯಾವುದೇ ಪ್ರತಿಫಲ ಬಯಸದೆ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳವನ್ನು ಅಭಿನಂದಿಸಿದರು.

ನೆರೆ, ಪ್ರವಾಹ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದಿನದ 24 ಗಂಟೆಯೂ ಕಾರ್ಯಪ್ರವೃತ್ತರಾಗುವ ಗೃಹರಕ್ಷಕ ದಳದವರ ಕೆಲಸವು ಶಿಸ್ತುಬದ್ದತೆಯನ್ನು ಎತ್ತಿ ತೋರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಅಂತರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಶೆಟ್ಟಿ, ಕಚೇರಿ ಅಧೀಕ್ಷಕಿ ಕವಿತಾ, ಕಾರ್ಕಳ ಘಟಕದ ಪ್ಲಟೂನ್ ಕಮಾಂಡರ್ ಪ್ರಭಾಕರ್ ಸುವರ್ಣ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗೃಹರಕ್ಷಕದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ, ಬ್ರಹ್ಮಾವರ ಘಟಕದ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ನಿರೂಪಿಸಿ, ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೆಂಟ್ ಕೆ. ಸಿ ರಾಜೇಶ್ ವಂದಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

Subscribe to our newsletter!

Other related posts

error: Content is protected !!