ಪಿಎಮ್ ಕೇರ್ಸ್ ಫಾರ್ ಚಿಲ್ಡ್ರನ್ಸ್ ಯೋಜನೆ ಅನುಷ್ಠಾನ
ಕಾರವಾರ ಜುಲೈ 11, 2021: ಕೋವಿಡ್-19 ಸಾಂಕ್ರಾಮಿಕದಿಂದ ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ಘೋಷಿಸಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ತಂದೆ ತಾಯಿಯರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳು ಈ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ.
2020 ಮಾರ್ಚ್ 11 ರ ನಂತರ ಕೋವಿಡ್ನಿಂದಾಗಿ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ 18 ವರ್ಷದೊಳಗಿನ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒಳಗೊಂಡಂತೆ ಅವರ ಆರೋಗ್ಯ ವಿಮೆ, ಶಿಕ್ಷಣ ಮತ್ತು ಸಮಾಜದಲ್ಲಿ ಸ್ವಾವಲಂಭಿಗಳಾಗಿ ಜೀವನ ನಿರ್ವಹಿಸಲು ಅನುವಾಗುವಂತೆ ಪ್ರಧಾನಮಂತ್ರಿ ಘೋಷಿಸಿರುವ ಪಿಎಮ್ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿಯಲ್ಲಿ ದಾಖಲಾದ ಪ್ರತಿ ಮಗುವಿಗೆ 23 ವರ್ಷ ತುಂಬಿದ ನಂತರ ತಲಾ ರೂ.10 ಲಕ್ಷಗಳನ್ನು ನೀಡಲಾಗುವುದು.
ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಕೋವಿಡ್-19 ಸಾಂಕ್ರಾಮಿಕದಿಂದ, ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ 18 ವರ್ಷ ದೊಳಗಿನ ಮಕ್ಕಳಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಪ್ರತಿ ತಿಂಗಳು ರೂ. 3500 ಗಳನ್ನು ಆರ್ಥಿಕ ಧನ ಸಹಾಯ ನೀಡಲಾಗುವುದು.
ಪೋಷಣೆ ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಮಕ್ಕಳ ಪಾಲನಾ ಸಂಸ್ಥೆಗೆ ದಾಖಲೆ, ರಾಜ್ಯ ಸರ್ಕಾರದ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ಪ್ರವೇಶಿಸಲು ಯಾವ ತರಗತಿಯಿಂದ ಅವಕಾಶವಿದೆಯೋ ಆ ತರಗತಿಗೆ ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲದೆ ನೇರವಾಗಿ ಪ್ರವೇಶಾವಕಾಶ ಮತ್ತು ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ದೊರೆಯುವುದು.
ಕೋವಿಡ್-19 ದಿಂದಾಗಿ ಪೋಷಕರಿಬ್ಬರನ್ನೂ ಕಳೆದುಕೊಂಡ ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರ ವಿವಾಹ, ಉನ್ನತ ಶಿಕ್ಷಣ ಹಾಗೂ ಸ್ವಯಂ ಉದ್ಯೋಗದ ಉದ್ದೇಶಗಳಿಗಾಗಿ ತಲಾ ರೂ. 1 ಲಕ್ಷ ಆರ್ಥಿಕ ಧನಸಹಾಯ ಈ ಎಲ್ಲಾ ಸೌಲಭ್ಯಗಳನ್ನು ರಾಜ್ಯ ಸರ್ಕಾರವು ಮುಖ್ಯಂತ್ರಿಯವರ ಬಾಲಸೇವಾ ಯೋಜನೆಯಡಿ ಜೂನ್ 25 ರಂದು ಘೋಷಣೆ ಮಾಡಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಸಹಾಯಕ ಮಕ್ಕಳ ರಕ್ಷಣಾಧಿಕಾರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉತ್ತರ ಕನ್ನಡ ಕಾರವಾರ ಇವರ ದೂರವಾಣಿ ಸಂಖ್ಯೆ 08382-220182 ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.