ವಿವಿಧ ವಲಯಗಳಿಗೆ ಆದ್ಯತೆಯ ಮೇಲೆ ಆರ್ಥಿಕ ನೆರವು ಒದಗಿಸಿ: ಡಾ. ನವೀನ್ ಭಟ್
ಉಡುಪಿ ಜೂನ್ 30, 2021: ಜಿಲ್ಲೆಯಲ್ಲಿನ ಬ್ಯಾಂಕುಗಳು ಗೃಹಸಾಲ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಕ್ಕೆ, ಶಿಕ್ಷಣ ಹಾಗೂ ಆದ್ಯತಾ ವಲಯದವರಿಗೆ ಸಾಲ ನೀಡುವ ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಬ್ಯಾಂಕ್ಗಳಲ್ಲಿ ಸಾರ್ವಜನಿಕರ ಠೇವಣಿ ಹಣ ಬ್ಯಾಂಕುಗಳು ನೀಡುವ ಸಾಲದ ಅನುಪಾತವು ಆರ್.ಬಿ.ಐ ಸೂಚಿಸಿರುವ ಠೇವಣಿ ಹಣದ ಶೇಕಡಾ 60 ರಷ್ಟು ಹಣವನ್ನು ಸಾಲ ನೀಡುವ ಮೂಲಕ ನಿರ್ಧಿಷ್ಟ ಗುರಿ ಸಾಧಿಸಬೇಕು. ಆದರೆ ಜಿಲ್ಲೆಯಲ್ಲಿ ನಿಗದಿತ ಗುರಿಗಿಂತ ಸ್ವಲ್ಪ ಕಡಿಮೆ ಇದೆ. ಇದರಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂದು ಸೂಚನೆ ನೀಡಿದರು.
ವಾಣಿಜ್ಯ ಬ್ಯಾಂಕುಗಳು ಸಮಾಜದಲ್ಲಿನ ಜನರು ಆರ್ಥಿಕ ಚಟುವಟಿಕೆ ಸೇರಿದಂತೆ ಮತ್ತಿತರೆ ಕಾರ್ಯಗಳಿಗೆ ನೀಡುವ ವಿವಿಧ ಸಾಲ ಸೌಲಭ್ಯಗಳನ್ನು ಮೇಳಗಳನ್ನು ಆಯೋಜಿಸುವುದರೊಂದಿಗೆ ಜನರಿಗೆ ಪ್ರಚಾರ ಪಡಿಸಿ, ಅರ್ಹರಿಗೆ ನಿಯಾಮನುಸಾರವಾಗಿ ಸಾಲವನ್ನು ನೀಡಬೇಕು ಎಂದರು.
ಸಾಲ ಸೌಲಭ್ಯವನ್ನು ಒದಗಿಸುವಾಗ ಏಕವ್ಯಕ್ತಿಗೆ ಹೆಚ್ಚಿನ ಮೊತ್ತದ ಸಾಲವನ್ನು ನೀಡುವ ಬದಲು ಹೆಚ್ಚಿನ ಜನರಿಗೆ ಆರ್ಥಿಕ ನೆರವನ್ನು ಒದಗಿಸಿ, ಸ್ವಯಂ ಉದ್ಯೋಗ ಸೇರಿದಂತೆ ಮತ್ತಿತರ ವಾಣಿಜ್ಯ ಚಟುವಟಿಕೆ ಮಾಡಲು ಅನುವು ಮಾಡಿಕೊಟ್ಟಲ್ಲಿ ಸಾಲ ಮರುಪಾವತಿಯು ಉತ್ತಮ ರೀತಿಯಲ್ಲಿ ಆಗುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ವಿವಿಧ ಇಲಾಖೆಗಳ ಮೂಲಕ ಸಬ್ಸಿಡಿ ಸಹಿತವಾಗಿ ಸಾಲ ಸೌಲಭ್ಯಕ್ಕೆ ಆಯ್ಕೆಯಾದವರಿಗೆ ಬ್ಯಾಂಕ್ಗಳು ಸ್ಪಂದಿಸಿ, ಆದ್ಯತೆಯ ಮೇಲೆ ಶೀಘ್ರದಲ್ಲಿಯೇ ಸಾಲಸೌಲಭ್ಯವನ್ನು ನೀಡಬೇಕು ಎಂದು ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಡಿ ಈ ಹಿಂದೆ ನೀಡುತ್ತಿದ್ದ 10,000 ಮೊತ್ತವನ್ನು ಗರಿಷ್ಟ 20,000 ದ ವರೆಗೆ ನೀಡಲು ಅವಕಾಶವಿದೆ. ಇವುಗಳ ಅನುಷ್ಠಾನಕ್ಕೆ ಬ್ಯಾಂಕ್ಗಳು ಆದ್ಯತೆ ನೀಡಬೇಕು ಎಂದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಅನುಕೂಲವಾಗುವಂತೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಗ್ರಾಮ ಪಂಚಾಯತ್ಗಳ ಸಹಕಾರದೊಂದಿಗೆ ಪ್ರತಿಶತಃ ನೂರರಷ್ಟು ಸಾಧಿಸಲು ಮುಂದಾಗಬೇಕು ಎಂದರು.
2016-17ನೇ ಸಾಲಿನ ರ ಹವಾಮಾನ ಆಧಾರಿತ ಬೆಳೆ ಹಾನಿಯ ವಿಮೆ ಮೊತ್ತದ ಹಣವನ್ನು ಈವರೆಗೆ ಪಾವತಿಯಾಗದೇ ಇರುವ ಬಗ್ಗೆ ದೂರುಗಳೂ ಕೇಳೀ ಬರುತ್ತಿವೆ. ಇವುಗಳನ್ನು ಮುಂದಿನ ಹದಿನೈದು ದಿನಗಳ ಒಳಗಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪ್ರಸ್ತುತ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಬೆಳೆ ಸಾಲಮಾಡಿದವರು ಕಡ್ಡಾಯವಾಗಿ ವಿಮಾ ನೋಂದಣಿ ಮಾಡಿಸಬೇಕು ಈವರೆಗೆ 4 ಸಾವಿರದಷ್ಟು ಮಾತ್ರ ವಿಮೆ ನೋಂದಣಿಯಾಗಿದೆ. ಬಾಕಿ ಉಳಿದವುಗಳನ್ನು ವಿಮೆಗೆ ಒಳಪಡಿಸಬೇಕು ಎಂದರು
ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಮಾತನಾಡಿ, ಬ್ಯಾಂಕ್ಗೆ ಈವರೆಗೆ 9602 ಕೋಟಿ ರೂಗಳಷ್ಟು ಸಾಲ ನೀಡಲು ಗುರಿ ಇದ್ದು, 8693 ಕೋಟಿ ರೂಗಳಷ್ಟು ಸಾಲ ವಿತರಿಸಿ ಶೇಕಡಾ 91% ಸಾಧಿಸಿದೆ. ರಷ್ಟು ಎಂದ ಅವರು ಕೃಷಿ ಕ್ಷೇತ್ರಕ್ಕೆ 4164 ಕೋಟಿರೂ. ಸೂಕ್ಷö್ಮ , ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ 2483 ಕೋಟಿ ರೂ, ಶೈಕ್ಷಣಿಕ ಕ್ಷೇತ್ರಕ್ಕೆ 122 ಕೋಟಿ ರೂ , ವಸತಿ ಕ್ಷೇತ್ರಕ್ಕೆ 542 ಕೋಟಿ ರೂ, ವಿತರಿಸಲಾಗಿದೆ ಎಂದರು. ಸಭೆಯಲ್ಲಿ ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಜಗದೀಶ್ ಶೆಣೈö, ಉಡುಪಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ. ಕಾಳಿ, ನಬಾರ್ಡ್ ಎಜಿಎಂ ಸಂಗೀತಾ ಕರ್ತ ಹಾಗೂ ವಿವಿಧ ಇಲಾಖೆ ಮತ್ತು ಬ್ಯಾಂಕ್ಗಳ ಅಧಿಕಾರಿಗಳು ಉಪಸ್ಥಿತರಿದ್ದರು.