ವಿದೇಶದಲ್ಲಿ ಉದ್ಯೋಗಿಗಳಾಗಿರುವವರಿಗೆ ಶೀಘ್ರ ಲಸಿಕೆ ಪೂರೈಸಲು ಮುಸ್ಲಿಮ್ ಒಕ್ಕೂಟ ಆಗ್ರಹ
ಮಂಗಳೂರು, ಮೇ 24, 2021 : ಲಸಿಕೆ ಲಭ್ಯತೆ ಇಲ್ಲದೆ ಇರುವ ಕಾರಣ, ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಸ್ತುತ ರಜೆಯಲ್ಲಿ ಊರಿಗೆ ಬಂದಿರುವ ನೂರಾರು ಜನರು ಸಂಕಷ್ಟದಲ್ಲಿದ್ದಾರೆ.
“ವಿದೇಶದಲ್ಲಿ ನೌಕರಿ ಮಾಡುತ್ತಿರುವ, ಪ್ರಸ್ತುತ ರಜೆಯಲ್ಲಿ ಊರಿಗೆ ಆಗಮಿಸಿ ಪ್ರಥಮ ಡೋಸ್ ಲಸಿಕೆ ಪಡೆದವರು ಎರಡನೇ ಲಸಿಕೆಯ ಡೋಸ್ ಅಲಭ್ಯತೆ ಯಿಂದಾಗಿ ,ತೀವ್ರ ಸಮಸ್ಯೆ ಎದುರಿಸುತ್ತಿದ್ದು, ತಮ್ಮ ಸ್ವವಿಳಾಸದ ಕೋವಿಡ್ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿಲ್ಲದೆ ವಿದೇಶ ಪ್ರಯಾಣ ಮುಂದುವರಿಸಲು ಅಸಾಧ್ಯವಾಗಿರುತ್ತದೆ,” ಎಂದು ಮಾಜಿ ಮೇಯರ್ ಹಾಗೂ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಕೆ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಲಸಿಕೆ ಹಾಕಿಸಿ ಕೊಳ್ಳದೆ ಪ್ರಯಾಣ ಮುಂದುವರಿಸುವ ಹಾಗಿಲ್ಲ. ಆದುದರಿಂದ ವಿದೇಶದಲ್ಲಿ ನೌಕರಿ ಹೊಂದಿರುವ ಸಾವಿರಾರು ಜನರ ವಿದೇಶಿ ಉದ್ಯೋಗವು ಪ್ರಸ್ತುತ ಸಂಕಷ್ಟದಲ್ಲಿ ಇದ್ದು,ಲಸಿಕೆ ಪೂರ್ತಿ ಗೊಳಿಸದ ಏಕೈಕ ಕಾರಣಕ್ಕಾಗಿ ಅವರು ಉದ್ಯೋಗ ಕಳೆದು ಕೊಳ್ಳುವ ಸಮಸ್ಯೆ ಎದುರಾಗಿದೆ,” ಎಂದಿದ್ದಾರೆ.
“ಕರ್ನಾಟಕ ಸರ್ಕಾರವು ವಿದೇಶಿ ಪ್ರಯಾಣಿಕರಿಗೆ ಎರಡನೇ ಲಸಿಕಾ ಡೋಸ್ ಗೆ ಶೀಘ್ರ ವ್ಯವಸ್ಥೆ ಮಾಡಬೇಕು. ರಾಜ್ಯದ ಪ್ರಮುಖ ವಿರೋಧ ಪಕ್ಷ ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು,” ಎಂದು ಅಶ್ರಫ್ ಒತ್ತಾಯಿಸಿದ್ದಾರೆ.