ರಾಜ್ಯಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳ ಪೂರೈಕೆ
ನವದೆಹಲಿ, ಮೇ 23, 2021: ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಆಲ್ಲದೆ, ಭಾರತ ಸರಕಾರವು ರಾಜ್ಯಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿದೆ.
ಕೋವಿಡ್-19 ಲಸಿಕೆಯ ಉದಾರೀಕರಣ ಹಾಗೂ ವೇಗವರ್ಧಿತ 3ನೇ ಹಂತದ ಕಾರ್ಯತಂತ್ರದ ಅನುಷ್ಠಾನವು 2021ರ ಮೇ 1 ರಿಂದ ಪ್ರಾರಂಭವಾಗಿದೆ. ಇದರ ಅಡಿಯಲ್ಲಿ, ಪ್ರತಿ ತಿಂಗಳಲ್ಲಿ ಯಾವುದೇ ತಯಾರಕರು ಉತ್ಪಾದಿಸುವ ಕೇಂದ್ರ ಔಷಧ ಪ್ರಯೋಗಾಲಯದ (ಸಿಡಿಎಲ್) ಅನುಮೋದನೆ ಪಡೆದ ಲಸಿಕೆಯಲ್ಲಿ ಶೇ. 50ರಷ್ಟು ಡೋಸ್ಗಳನ್ನು ಭಾರತ ಸರಕಾರವು ಖರೀದಿಸುತ್ತದೆ.
ರಾಜ್ಯ ಸರಕಾರಗಳಿಗೆ ಈ ಹಿಂದಿನಂತೆಯೇ ಈ ಡೋಸ್ಗಳು ಸಂಪೂರ್ಣ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.
ಭಾರತ ಸರಕಾರವು ಇಲ್ಲಿಯವರೆಗೆ, ಉಚಿತವಾಗಿ ಮತ್ತು ರಾಜ್ಯ ಸರಕಾರಗಳಿಂದ ನೇರ ಖರೀದಿ ಮಾರ್ಗದ ಮೂಲಕ, ರಾಜ್ಯಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು (21,80,51,890) ಒದಗಿಸಿದೆ.
ರಾಜ್ಯಗಳಲ್ಲಿ ಲಸಿಕೆ ನೀಡಲು ಇನ್ನೂ 1.90 ಕೋಟಿಗಿಂತಲೂ ಅಧಿಕ (1,90,20,313) ಡೋಸ್ಗಳು ಲಭ್ಯವಿವೆ. ಇದಲ್ಲದೆ, ಇನ್ನೂ 40,650 ಲಸಿಕೆ ಡೋಸ್ಗಳು ಸಾಗಣೆ ಹಂತದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯವನ್ನು ತಲುಪಲಿವೆ.