ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸುವವರಿಗೆ ರೂ.2 ಲಕ್ಷ ವಿಮೆ
ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನಿಂದ ಮಾನವೀಯ ಕಾರ್ಯ
ಮಂಗಳೂರು, ಮೇ 21, 2021: ಕೊರೋನಾ ಸೋಂಕಿನಿಂದಾಗಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರ ಕೂಡ ಅತ್ಯಂತ ಸವಾಲಿನ ಕೆಲಸ.
ಅನೇಕ ಕಡೆ ಶವ ಸಂಸ್ಕಾರಕ್ಕೆ ವಿರೋಧ ಇದ್ದ ಪ್ರಸಂಗಗಳನ್ನೂ ಕೂಡ ನಾವು ನೋಡಿದ್ದೇವೆ. ಈ ನಡುವೆ, ಸಂಸ್ಕಾರ ಕೂಡ ಒಂದು ಸೇವೆ ಎನ್ನುವ ರೀತಿಯಲ್ಲಿ ಹಾಗೂ ಅದನ್ನು ವೃತ್ತಿ ಧರ್ಮವಾಗಿ ನಡೆಸಿಕೊಂಡು, ತಮ್ಮ ಕೈಲಾದಷ್ಟು ಸಹಾಯ ಮಾಡಿದ ಅನೇಕ ಸ್ಮಶಾನ ಕಾರ್ಮಿಕರು ಇದ್ದಾರೆ.
ಇಂಥವರ ಕಾರ್ಯವನ್ನು ಗಮನಿಸಿ, ಸ್ಮಶಾನದಲ್ಲಿ ಶವ ಸುಡುವವರ ಪ್ರಾಣ ಕೂಡ ಅಮೂಲ್ಯವೆಂದು ಅರಿತ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾದರಿಕಾರ್ಯಕ್ಕೆ ಮುಂದಾಗಿದೆ.
“ಮಂಗಳೂರಿನ ಬೋಳೂರು, ನಂದಿಗುಡ್ಡೆ, ಶಕ್ತಿನಗರ, ಕದ್ರಿ ಸ್ಮಶಾನದಲ್ಲಿ ಶವವನ್ನು ಸುಡುವವರ ಜೀವವೂ ಅಮೂಲ್ಯವಾಗಿರುವುದರಿಂದ ಅವರಿಗೆ ಹಾಗೂ ಅವರ ಪತ್ನಿ, ಮಕ್ಕಳಿಗೂ 2 ಲಕ್ಷದ ಜೀವವಿಮೆಯನ್ನು ಮಾಡಲು ಕ್ರಮ ಕೈಗೊಂಡಿದ್ದೇವೆ,” ಎಂದು ಟ್ರಸ್ಟ್ ಉಪಾಧ್ಯಕ್ಷ ಜಿ.ಹನುಮಂತ ಕಾಮತ್ ಹೇಳುತ್ತಾರೆ.
ಮಂಗಳೂರು ಮಹಾನಗರಪಾಲಿಕೆ ವಾರ್ಡ್ 26 ರ ಕಾರ್ಪೋರೇಟರ್ ಗಣೇಶ್ ಕುಲಾಲ್ ಅವರು ಕೊರೊನಾ ಸೊಂಕಿತರ ಶವ ಸಂಸ್ಕಾರದಲ್ಲಿ ಸಕ್ರಿಯವಾಗಿ ಮುಂಚೂಣಿಯಲ್ಲಿ ಸೇವಾನಿರತರಾಗಿರುವುದರಿಂದ ಅವರಿಗೂ ಜೀವವಿಮೆ ಮಾಡಲಾಗಿದೆ.
ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ಉತ್ತಮ ಕಾರ್ಯ ಜನಮೆಚ್ಚುಗೆ ಪಡೆದಿದೆ