ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತದ ಅಭಾವ : ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಎಂದ ಆಸ್ಪತ್ರೆ
ಮಣಿಪಾಲ, ಏಪ್ರಿಲ್ 24, 2021: ಸರ್ಕಾರದ ವತಿಯಿಂದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಕೋರೋನ ಲಸಿಕೆಯನ್ನು ಮೇ 1ರಿಂದ ನೀಡಲು ನಿರ್ಧರಿಸಲಾಗಿದೆ. ಆದರೆ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆದ 28 ದಿನ ರಕ್ತದಾನ ಮಾಡುವಂತಿಲ್ಲ. ಎರಡು ಡೋಸ್ ನಿಂದ ದ ಸುಮಾರು 2-3 ತಿಂಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಆಸ್ಪತ್ರೆಗೆ ಅವಶ್ಯವಿರುವಷ್ಟು ರಕ್ತದ ಸಂಗ್ರಹ ಆಗದೆ ಇರುವುದರಿಂದ ಕೆಲವೊಂದು ಕಾಯಿಲೆಗಳಿಗೆ ಮತ್ತು ಅಪಘಾತ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವ ಪ್ರಮೇಯ ತಲೆದೂರಲಿದೆ. ರಕ್ತ ದಾನಿಗಳಲ್ಲಿ ಹೆಚ್ಚಿನವರು 18 ರಿಂದ 40 ವರ್ಷದ ನಡುವಿನವರಾಗಿರುವುದರಿಂದ ರಕ್ತದ ತೀರ ಅಭಾವ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
“ಲಸಿಕೆ ಪಡೆಯುವ ಒಂದೆರಡು ದಿನದ ಮೊದಲು ನಿಮ್ಮ ಹತ್ತಿರದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ರಕ್ತ ದಾನ ಮಾಡಿ ಜೀವಗಳನ್ನು ಉಳಿಸಲು ಸಹಾಯ ಮಾಡಿ ಎಂದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ವಿನಂತಿಸಿದ್ದಾರೆ.
10ಕ್ಕಿಂತ ಹೆಚ್ಚು ದಾನಿಗಳು ಇದ್ದರೆ, ಆಸ್ಪತ್ರೆಯು ವಾಹನದ ವ್ಯವಸ್ಥೆ ಮಾಡುತ್ತದೆ ಎಂದು ಹೇಳಿದ್ದಾರೆ.