ಎ. ಶಾಮರಾವ್ ಫೌಂಡೇಶನ್, ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತುಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ
ಮಂಗಳೂರು, ಏಪ್ರಿಲ್ 17, 2021: ಎ. ಶಾಮರಾವ್ ಫೌಂಡೇಶನ್, ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆಯು ಶನಿವಾರ 17ನೇ ಎಪ್ರಿಲ್ 2021 ರಂದು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‍ನಲ್ಲಿ ನಡೆಯಿತು.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಚೆಯರ್‍ಮನ್ ಅಲೆನ್ ಸಿ. ಎ. ಪಿರೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಥಾಪಕರ ದಿನಾಚರಣೆಯ ಉಪನ್ಯಾಸ ನೀಡಿದರು.
“ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರವು ಸಮಾಜದ ಎರಡು ಮುಖ್ಯ ಆಧಾರ ಸ್ತಂಭಗಳಿದ್ದಂತೆ. ಶಿಕ್ಷಣವು ಸಮಾಜಕ್ಕೆ ಉತ್ತಮ ಭವಿಷ್ಯವನ್ನು ನೀಡಿದರೆ, ಬ್ಯಾಂಕಿಂಗ್ ಕ್ಷೇತ್ರವು ಸಮಾಜದಲ್ಲಾಗುವ ಉತ್ಪಾದನೆ ಹಾಗೂ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಹಕರಿಸುತ್ತದೆ ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ. ಶಾಮರಾವ್ ಫೌಂಡೇಶನ್‍ನ ಅಧ್ಯಕ್ಷ ಡಾ. ಎ. ರಾಘವೇಂದ್ರ ರಾವ್ ಮಾತನಾಡಿ, ತಮ್ಮ ಶಿಕ್ಷಣ ಸಂಸ್ಥೆಯು ಈ ಮಟ್ಟದಲ್ಲಿ ಬೆಳೆಯಲು ಶಿಕ್ಷಕರ ಪರಿಶ್ರಮವೇ ಮುಖ್ಯ ಕಾರಣ. ಕೆಲವೇ ದಿನಗಳಲ್ಲಿ ರಾಜ್ಯದ ರಾಜಧಾನಿಯಲ್ಲಿಯೂ ಶ್ರೀನಿವಾಸ್ ವಿಶ್ವವಿದ್ಯಾಲಯವು ತನ್ನ ಸಂಸ್ಥೆಯನ್ನು ತೆರೆಯಲಿದೆ ಎಂದರು.
ಬ್ಯಾಂಕಿಂಗ್ ಸಾಲ ಯೋಜನೆ, ಹಣಕಾಸು ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಾಬಲೇಶ್ವರ ಎಂ. ಎಸ್. ಅವರಿಗೆ 2021ನೇ ಸಾಲಿನ ಎ. ಶಾಮರಾವ್ ಸ್ಮಾರಕ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢ ಶಾಲಾ ವಿಭಾಗ ಹಾಗೂ ಪದವಿ ಪೂರ್ವ ವಿಭಾಗದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‍ನ ಶಿಕ್ಷಕರಾದ ಶ್ರೀ ಹರಿಕೃಷ್ಣ ದಂಬೆ ಇವರಿಗೆ ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಕುಲಸಚಿವರಾದ ಡಾ. ಅಜಯ್ ಕುಮಾರ್ ವಂದಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಕುಲಪತಿ ಡಾ. ಪಿ. ಎಸ್. ಐತಾಳ್, ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಕುಲಸಚಿವರುಗಳಾದ ಡಾ. ಅನಿಲ್ ಕುಮಾರ್, ಡಾ. ಶ್ರೀನಿವಾಸ್ ಮಯ್ಯ (ಮೌಲ್ಯಮಾಪನ), ಡಾ. ಅಜಯ್ ಕುಮಾರ್ (ಅಭಿವೃದ್ಧಿ), ಆದಿತ್ಯ ಕುಮಾರ್ (ಶೈಕ್ಷಣಿಕ ಮತ್ತು ಅಭಿವೃದ್ಧಿ), ಕುಮಾರಿ ಮೇಘನಾ ಹಾಗೂ ಮಾಸ್ಟರ್ ಇಶಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.