ಕೈಗಾ ಸೈಟ್ ಡೈರೆಕ್ಟರ್ ಗೆ ಮನವಿ ಸಲ್ಲಿಸಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ
ಕಾರವಾರ, ಮಾರ್ಚ್ 07, 2021: ಎನ್ಪಿಸಿಐಎಲ್ನ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್ಆರ್) ಅಡಿಯಲ್ಲಿ ಕಾರವಾರ ವೈದ್ಯಕೀಯ ಕಾಲೇಜಿನ ಅಧೀನದ ಜಿಲ್ಲಾಸ್ಪತ್ರೆಗೆ ಸುಸಜ್ಜಿತ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರ ಒದಗಿಸುವಂತೆ ಕೈಗಾ ಅಣು ವಿದ್ಯುತ್ ಸ್ಥಾವರದ ಸೈಟ್ ಡೈರೆಕ್ಟರ್ ಜೆ.ಆರ್.ದೇಶಪಾಂಡೆಯವರನ್ನು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ವಿನಂತಿಸಿದರು.
ಅಮದಳ್ಳಿಯ ವೀರಗಣಪತಿ ದೇವಸ್ಥಾನದ ಬಳಿ ರವಿವಾರ ಭೇಟಿ ಮಾಡಿದ ಮಾಧವ ನಾಯಕ ಈ ವಿಷಯದಲ್ಲಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ನೀಡಿದ್ದ ಮನವಿ ಕುರಿತು ಪ್ರಸ್ತಾಪಿಸಿದರು.
ಇದರಿಂದ ಕೈಗಾದ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಈಗ ಎಂ.ಆರ್.ಐ.ಸ್ಕ್ಯಾನಿಂಗ್ ಸೌಲಭ್ಯ ಪಡೆಯಲು ಪಕ್ಕದ ಜಿಲ್ಲೆ, ನೆರೆಯ ಗೋವಾ ರಾಜ್ಯಕ್ಕೆ ತೆರಳಿ ದುಬಾರಿ ವೆಚ್ಚ ಪಾವತಿಸುತ್ತಿರುವ ವಿಚಾರವನ್ನೂ ದೇಶಪಾಂಡೆಯವರಿಗೆ ತಿಳಿಸಲಾಯಿತು.
“ಈ ಕಾರಣಕ್ಕೆ ಅವರು ಜನಸಾಮಾನ್ಯರ ಹಿತದೃಷ್ಟಿಯಿಂದ ಸಂಸ್ಥೆಯ ವತಿಯಿಂದ ಸೌಲಭ್ಯ ಒದಗಿಸುವ ಕುರಿತು ಕ್ರಮವಹಿಸುವ ಭರವಸೆ ನೀಡಿದರು. ಕೆಲವೇ ದಿನಗಳಲ್ಲಿ ಜೆ.ಆರ್.ದೇಶಪಾಂಡೆ ಅವರು ಕೆಲಸದಿಂದ ನಿವೃತ್ತಿಯಾಗಲಿದ್ದು, ಅಷ್ಟರೊಳಗೆ ಸಕಾರಾತ್ಮಕ ಸ್ಪಂದನೆ ನೀಡುವ ಭರವಸೆ ನೀಡಿದ್ದಾರೆ,” ಎಂದು ಮಾಧವ ನಾಯಕ ದಿ ಕೆನರಾ ಪೋಸ್ಟ್ ಗೆ ತಿಳಿಸಿದರು.