ಮಾವು ಮತ್ತು ಗೇರು ಹೂ ರಕ್ಷಣೆಗೆ ಸಲಹೆ
ವಾರ್ತಾ ವಿಶೇಷ
ಚಿಕ್ಕಮಗಳೂರು.ಡಿ.೦೮: ಜಿಲ್ಲೆಯಲ್ಲಿ ಪ್ರಸ್ತುತ ಮಾವು ಬೆಳೆಯನ್ನು ೪೨೨೨ ಹೆ. ಮತ್ತು ಗೇರನ್ನು ೫೧೩ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರಿನಲ್ಲಿ ಟೀ ಸೊಳ್ಳೆ ಕೀಟಗಳಿಂದ ಫಸಲು ನಷ್ಟವಾಗದಂತೆ ರೈತರು ಈ ಹಂತದಲ್ಲೇ ಮುಂಜಾಗ್ರತೆ ವಹಿಸುವುದು ಅವಶ್ಯಕ.
ಈ ವರ್ಷ ಗೇರು ಗಿಡಗಳಲ್ಲಿ ಹೂ ಗೊಂಚಲು ಚೆನ್ನಾಗಿ ಮತ್ತು ಬೇಗ ಬಂದಿದ್ದ ಈಗಾಗಲೇ ಅರಳಲಾರಂಭಿಸಿವೆ. ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರಿನಲ್ಲಿ ಟೀಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲನ್ನು ಚೂಪಾದ ಕೊಂಬಿನಿಂದ ಚುಚ್ಚಿರಸ ಹೀರುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.೨೫ ರಿಂದ ೭೫ ರಷ್ಟು ಫಸಲು ನಷ್ಟವಾಗುತ್ತದೆ.
ಮಾವು ಮತ್ತು ಗೇರು ಗಿಡಗಳಲ್ಲಿ ಕಂಡು ಬರುವ ಒಣಗಿದ ರೆಂಬೆ-ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಗಿಡದ ಭಾಗಕ್ಕೆ ಬೋರ್ಡೋ ಅಥವಾ ಕಾಪರ ಆಕ್ಷಿಕ್ಲೋರೈಡ್ ದ್ರಾವಣ ಹಚ್ಚಬೇಕು. ಬುಡದ ಸುತ್ತಲೂ ಉಳುಮೆ ಮಾಡಿ, ಮಣ್ಣನ್ನು ಸಡಿಲಗೊಳಿಸಬೇಕು.
ಗೇರು ಬೆಳೆಗೆ ನೀರಾವರಿ ಪ್ರಾರಂಬಿಸಬೇಕು. ಆದರೆ ಮಾವಿನ ಬೆಳೆಗೆ ಸಣ್ಣ ಮಿಡಿಗಾಯಿ ಆಗುವ ಹಂತದವರೆಗೂ ನೀರಾವರಿ ಪ್ರಾರಂಭಿಸಬಾರದು.
ಮಾವಿನಲ್ಲಿ ಹೂ ಮೊಗ್ಗು ಹೊರಟ ನಂತರ ಹೂ ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ ಅಥವಾ ಕ್ಲೋರೋಫೈರಿಪಾಸ್ ೨ ಮಿಲೀ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಇದರ ಜೊತೆಗೆ ಐ.ಐ.ಹೆಚ್.ಆರ್ ಮ್ಯಾಂಗೋ ಸ್ಪೆಷಲ್ ೫ ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸುವುದು ಉತ್ತಮ. ನಂತರ ಹೂ ಬಿಡಲು ಪ್ರಾರಂಭವಾಗಿ ಕಡಲೇಕಾಯಿ ಗಾತ್ರದ ಮಾವಿನ ಕಾಯಿಯಾಗುವವರೆಗೆ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಡೆಕಾಮೆಥ್ರಿನ್ ೧.೦ ಮೀ.ಲೀ ಅಥವಾ ಇಮಿಡಾಕ್ಲೋಪ್ರಿಡ್ ೦.೩ ಮೀ.ಲೀ. ಅಥವಾ ೦.೫ ಮೀ.ಲೀ ಸೈಪರಮೆಥ್ರಿನ ಇವುಗಳಲ್ಲಿ ಯಾವುದಾದರೂ ಕೀಟನಾಶಕದ ಜೊತೆಗೆ ಕಾರ್ಬೆಡೆಂಜಿಮ್ ೧ ಗ್ರಾಂ ಅಥವಾ ಮ್ಯಾಂಕೋಜೆಬ್ ೨ ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ೨೫-೩೦ ದಿನಗಳಿಗೊಮ್ಮೆ ಅವಶ್ಯಕತೆಗೆ ಅನುಗುಣವಾಗಿ ಸಿಂಪಡಿಸುತ್ತಿರಬೇಕು.
ಗೋಡಂಬಿ ಬೆಳೆಯಲ್ಲಿ ಟೀ ಸೊಳ್ಳೆ ಕೀಟ ನಿಯಂತ್ರಣಕ್ಕೆ ಡೈಮಿಥೋಯೇಟ್ ೧.೭೫ ಮಿ.ಲೀ ಅಥವಾ ಲ್ಯಾಂಬ್ಡಾಸೈಲೋಥ್ರಿನ್ ೧ ಮೀ.ಲೀ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ರೈತ ಬಾಂಧವರು ವೈಜ್ಞಾನಿಕವಾಗಿ ಈಗಿಂದಲೇ ನಿರ್ವಹಣೆ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಗುಣಮಟ್ಟದ ಮಾವು ಮತ್ತು ಗೇರು ಬೆಳೆಗಳ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್, ವಿಷಯ ತಜ್ಞ ಯಶವಂತ್ ಕುಮಾರ್ ದೂ.ಸಂ: ೦೮೨೬೨-೨೯೫೦೪೩, ೮೬೧೮೧೮೬೫೮೬ ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.