ಆತ್ಮ ತೃಪ್ತಿಯಿಂದ ಕೆಲಸ ಮಾಡಲು ಡಾ. ಕುಮಾರ್ ಕರೆ
ಮಂಗಳೂರು, ಸೆ.15, 2022: ಕೇವಲ ಕಡತಗಳ ನಿರ್ವಹಣೆಯಲ್ಲಿ ಕಳೆದು ಹೋಗದೇ ಆತ್ಮ ತೃಪ್ತಿಯಿಂದ ಸೇವೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಕರೆ ನೀಡಿದರು.
ಅವರು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸೆ.15ರ ಗುರುವಾರ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ವಿಷಯಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯೆಲ್ ಸಮೀಕ್ಷೆ ನಡೆಸಿ, ಅದನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಪಂಚತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ, ಅಧಿಕಾರಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು, ಪ್ಲೇಸ್ಟೋರ್‍ನಿಂದ ಆರ್.ಡಬ್ಯ್ಲೂ.ಎಸ್ ಆಪ್ ಡೌನ್‍ಲೋಡ್ ಮಾಡಿಕೊಂಡು ಗ್ರಾಮದಲ್ಲಿರುವ ಬೋರ್ ವೆಲ್ , ಕೆರೆಗಳನ್ನು ಜಿಯೋ ಟ್ಯಾಗಿಂಗ್‍ಗೆ ಒಳಪಡಿಸಬೇಕು, ಪ್ರಧಾನ ಮಂತ್ರಿ ಜನಾರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಂಥ ಮಿತ್ರ ಯೋಜನೆಯ ಅನುಷ್ಠಾನ ಸಮಪರ್ಕವಾಗಬೇಕು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳನ್ನು ಗ್ರಾಮಗಳ ಗ್ರಂಥಾಲಯಗಳತ್ತ ಆಕರ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸ್ವಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸುವುದು ಕೇವಲ ಪೌರಕಾರ್ಮಿಕರು ಮತ್ತು ಸರ್ಕಾರದ ಇಲಾಖೆಗಳ ಜವಾಬ್ದಾರಿ ಅಷ್ಟೇ ಅಲ್ಲ, ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರೀಕರೂ ಪಾಲ್ಗೊಳ್ಳಬೇಕು ಎಂದರು.
ಮಹಿಳೆಗೆ ಗೌರವ ನೀಡುವುದು ಹಿಂದಿನಿಂದಲೂ ಬಂದ ಪರಂಪರೆಯಾಗಿದ್ದು, ಆ ದಿಸೆಯಲ್ಲಿ ಬಯಲು ಬಹಿರ್ದೆಸೆಗೆ ವಿದಾಯ ಹೇಳಬೇಕಿದೆ, ಶೌಚಾಲಯಗಳನ್ನು ನಿರ್ಮಿಸುವುದು ಹಾಗೂ ಅದರ ಬಳಕೆ ಕಡ್ಡಾಯವಾಗಿ ಆಗಬೇಕು, ಗ್ರಾಮಸ್ಥರಲ್ಲಿ ನೈರ್ಮಲ್ಯದ ಸೂಕ್ತ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ನಿರಂತರವಾಗಿ ಶಾಲಾ ಆವರಣ, ಬೀದಿಗಳು, ಆಟದ ಮೈದಾನಗಳ ಸುತ್ತಮುತ್ತ ಶ್ರಮದಾನ ಏರ್ಪಡಿಸಬೇಕು, ಮೂಲದಲ್ಲಿಯೇ ಹಸಿಕಸ ಮತ್ತು ಒಣ ಕಸ ವಿಲೇವಾರಿ ಮಾಡುವ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ಆನಂದ ಕುಮಾರ್, ಯೋಜನಾ ನಿರ್ದೇಶಕ ಎಚ್.ಆರ್. ನಾಯಕ್, ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಭವಾನಿ ಶಂಕರ್, ಕುಸುಮಾಧರ್, ದಯಾವತಿ, ರಾಜಣ್ಣ ಹಾಗೂ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಡೊಂಬಯ್ಯ ಇಡ್ಕಿದು, ಪವನ್ ಕುಮಾರ್ ಎಸ್. ಶೆಟ್ಟಿ ಹಾಗೂ ನವೀನ್, ಜಲಜೀವನ್ ಮಿಷನ್‍ನ ವಿಘ್ನೇಶ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.