ಗುಡುಗು ಸಿಡಿಲಿನ ಬಗ್ಗೆ ಜಾಗೃತಿ ಮೂಡಿಸಲು ಎಡಿಸಿ ಸೂಚನೆ
ಚಿಕ್ಕಮಗಳೂರು, ಏ.25, 2022: ಗುಡುಗು ಸಿಡಿಲಿನಿಂದಾಗುವ ತೊಂದರೆಗಳು, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಮುಂತಾದವುಗಳ ಬಗ್ಗೆ ಜನತೆಗೆ ಅರಿವು, ಮಾಹಿತಿ ನೀಡಲು ಎಲ್ಲಾ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರೂಪಾ ಹೇಳಿದರು.
ಅವರು ಸೋಮವಾರ ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿನ ಕೆಸ್ವಾನ್ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ವೀಡಿಯೋ ಸಂವಾದದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲಾ ಇಲಾಖೆಗಳು ಗುಡುಗು ಸಿಡಿಲಿನಿಂದಾಗುವ ತೊಂದರೆಗಳು, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಬ್ಯಾನರ್, ಭಿತ್ತಿಪತ್ರಗಳನ್ನು ಜನಸೇರುವ ಪ್ರದೇಶಗಳಲ್ಲಿ, ಜಿಲ್ಲಾ ಪಂಚಾಯಿತಿ, ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳ ಸುತ್ತಮುತ್ತಲಿನಲ್ಲಿ ಲಗತ್ತಿಸಲು ಮತ್ತು ಸಿಡಿಲಿನ ಬಗ್ಗೆ ಮಾಹಿತಿ ನೀಡುವ ’ಸಿಡಿಲು’ ತಂತ್ರಾಂಶದ ಬಗ್ಗೆ ಮಾಹಿತಿ ನೀಡಲು ಅವರು ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮರ, ಅರಣ್ಯ ಪ್ರದೇಶಗಳಲ್ಲಿ ಸಿಡಿಲಿನಿಂದ ಹೆಚ್ಚು ಅಪಾಯದ ಸಾಧ್ಯತೆಯಿದೆ, ಜಾನುವಾರು ಮೇಯಿಸಲು ತೆರಳಿದವರು ಗುಡುಗು ಸಿಡಿಲು ಸಂದರ್ಭದಲ್ಲಿ ರಕ್ಷಣೆ ಪಡೆಯಲು ಮರಗಳ ಅಡಿಯಲ್ಲಿ ನಿಲ್ಲುವುದು ಅಪಾಯಕಾರಿಯಾಗಿದೆ. ಆದುದರಿಂದ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.