ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಣೆ
ಕಾರವಾರ ಮಾ. 27, 2022: ಕಷ್ಟ ಕಾರ್ಪಣ್ಯಗಳಿಗೆ ಹಿಂಜರಿಯದೇ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಿ ಅರಿಷಡ್ವರ್ಗಗಳಿಂದ ಮುಕ್ತರಾಗಿ ಸತ್-ಚಿತ-ಆನಂದ್ ದಿಂದ ಜೀವನವನ್ನು ಬೆಳಕಾಗಿಸಿಕೊಳ್ಳಬೇಕೆಂದು ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಭಾನುವಾರ ಆಚರಿಸಲಾದ ಯೋಗಿ ನಾರೇಯಣ ಯತೀಂದ್ರ ಜಯಂತಿ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರಕಾರ ಇದೇ ಮೊದಲ ಬಾರಿಗೆ 18ನೇ ಶತಮಾನದ ದಾರ್ಶನಿಕ ಪುರುಷರಲ್ಲಿ ಪ್ರಮುಖರಾದ ಯೋಗಿ ನಾರೇಯಣ ಯತೀಂದ್ರರ ಜಯಂತಿಯನ್ನು ಆಚರಿಸುತ್ತಿದೆ. ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಲ್ಲರೂ ಅವರ ಜೀವನಸಾರವನ್ನು ತಿಳಿದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
ಅಜ್ಞಾನವನ್ನು ತೊಡೆದುಹಾಕಿ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಬೇಕು. ಮಕ್ಕಳಿಗೆ ಸಣ್ಣಪ್ರಾಯದಲ್ಲಿಯೇ ಕೊಡುವ ಸಂಸ್ಕಾರವು ಭವಿಷ್ಯದಲ್ಲಿ ಅವರ ಜೀವನವು ಉಜ್ವಲವಾಗಲು ಕಾರಣವಾಗುತ್ತದೆ. ನೈಜ ಭಕ್ತಿಯ ಕುರಿತಾದ ಅವರ ನುಡಿಗಳು ನಮ್ಮೆಲ್ಲರಿಗೂ ಇಂದು ಜೀವನಸ್ಪೂರ್ತಿಯನ್ನು ನೀಡುತ್ತವೆ. ಆತ್ಮಶುದ್ಧತೆ, ಮಾಡುವ ಕೆಲಸದಲ್ಲಿನ ಶ್ರದ್ಧೆ ನಮ್ಮನ್ನು ಉನ್ನತ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ್, ಯೋಗಿ ಯತೀಂದ್ರರ ಸಮುದಾಯದ ಮುಖಂಡರು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಇತರರು ಇದ್ದರು.