ಉಡುಪಿ ಕೇದಾರ ಕಜೆ ಹುಬ್ಬಳ್ಳಿ-ಧಾರವಾಡ ಮಾರುಕಟ್ಟೆಗೆ ಬಿಡುಗಡೆ

 ಉಡುಪಿ ಕೇದಾರ ಕಜೆ ಹುಬ್ಬಳ್ಳಿ-ಧಾರವಾಡ ಮಾರುಕಟ್ಟೆಗೆ ಬಿಡುಗಡೆ
Share this post

ಉಡುಪಿ, ಮಾ 27, 2022: ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮೂಲಕ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಸಾವಯವ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ “ಉಡುಪಿ ಕೇದಾರ ಕಜೆ” ಹುಬ್ಬಳ್ಳಿ – ಧಾರವಾಡ ಬಂಟರ ಸಂಘದ ಶ್ರೀ ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಜಗದೀಶ್ ಶೆಟ್ಟರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ, ಕೇದಾರ ಕಜೆ ಕುಚ್ಚಲಕ್ಕಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿಯವರಾದ ಬಸವರಾಜ ಹೊರಟ್ಟಿ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಇಂದಿನ ದಿನಗಳಲ್ಲಿ ಯುವಜನತೆಯ ಆಸಕ್ತಿ ಕೃಷಿ ಕ್ಷೇತ್ರದತ್ತ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಉಡುಪಿಯಲ್ಲಿ ವಿದ್ಯಾರ್ಥಿಗಳನ್ನು, ಯುವ ಸಮುದಾಯವನ್ನು ಸೇರಿಸಿ ರೈತರು ಹಾಗೂ ಎಲ್ಲರನ್ನು ಒಗ್ಗೂಡಿಸಿ ಸಮೂಹವಾಗಿ ಸಂಘಟನೆ ಮಾಡಿ ಹಡಿಲು ಬಿದ್ದ ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಿ ಒಂದು ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದಾರೆ. ಎಲ್ಲರೂ ಈ ಕೃಷಿ ಕಾರ್ಯಕ್ಕೆ ಕೈಜೋಡಿಸಿ ಇದು ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂದರು.

ಕೇದಾರಕಜೆ ಕುಚ್ಚಲಕ್ಕಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿಯವರಾದ ಜಗದೀಶ್ ಶೆಟ್ಟರ್ ಮಾತನಾಡಿ ಕೇದಾರೋತ್ಥಾನ ಟ್ರಸ್ಟ್ ಮಾಡಿ ಎಲ್ಲರನ್ನು ಒಟ್ಟು ಮಾಡಿ ರಚನಾತ್ಮಕವಾಗಿ ಸಾವಿರಾರು ಎಕರೆ ಹಡಿಲು ಬಿಟ್ಟ ಕೃಷಿ ಭೂಮಿಗಳಿಗೆ ಕಾಯಕಲ್ಪ ನೀಡಿ ಪುಣ್ಯದ ಕಾರ್ಯ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯಗಳನ್ನು ವಿಶೇಷವಾಗಿ ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವ ಭರವಸೆ ನೀಡಿದರು.

ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಕೆ ರಘುಪತಿ ಭಟ್ ಅವರು ಮಾತನಾಡಿ, ಹಡಿಲು ಭೂಮಿ ಕೃಷಿ ಮಾಡಲು ಕೈಜೋಡಿಸಿದ ಎಲ್ಲರಿಗೂ ಹಾಗೂ ಎಲ್ಲಾ ಸಂಘಟನೆಗಳಿಗೂ ಕೃತಜ್ಞತೆಗಳನ್ನು ಸಲ್ಲಿಸಿ ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉಡುಪಿ ಕೇದಾರ ಕಜೆ ಕುಚ್ಚಲಕ್ಕಿ ಮಾರುಕಟ್ಟೆಗೆ ಸಹಕರಿಸುವಂತೆ ಮನವಿ ಮಾಡಿದರು.

ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕೃಷಿ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭಹಾರೈಸಿದರು.

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಉಪಾಧ್ಯಕ್ಷರು, ಉದ್ಯಮಿಗಳಾದ ಸುಗ್ಗಿ ಸುಧಾಕರ್ ಶೆಟ್ಟಿ, ಬಿಲ್ಲವ ಸಂಘದ ಉಪಾಧ್ಯಕ್ಷರಾದ ವಿಜಯ್ ಪೂಜಾರಿ, ಧಾರವಾಡ ಹೋಟೆಲ್ ಒಡೆಯರ ಸಂಘದ ಅಧ್ಯಕ್ಷರಾದ ಮಹೇಶ್ ಶೆಟ್ಟಿ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀಕಾಂತ್ ಕೆಮ್ತೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!