ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ. ಕುಮಾರ್
ಮಂಗಳೂರು,ಮಾ.23, 2022: ಮಳೆ ನೀರು ಕೊಯ್ಲಿಗೆ ಜಿಲ್ಲೆಯ ನಾಗರೀಕರು ಗಮನ ಹರಿಸುವ ಅಗತ್ಯತೆ ಇದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್‍ನ ಮಿನಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ಪಚ್ಛ ಭಾರತ್ ಮಿಷನ್ (ಗ್ರಾ), ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಂಗಳೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈಜ್ಞಾನಿಕ ವಿಧಾನದ ಮೂಲಕ ಜಿಲ್ಲೆಯಲ್ಲಿ ಪ್ರತಿ ವರ್ಷ ನಾಲ್ಕು ಸಾವಿರ ಮಿಲಿ ಮೀಟರ್ ಮಳೆ ನೀರನ್ನು ಮಳೆ ಕೊಯ್ಲು ಮೂಲಕ ಸಂಗ್ರಹಿಸಬಹುದಾಗಿದೆ. ಅದರೊಂದಿಗೆ ಕೊಳವೆ ಬಾವಿಯ ಅಕ್ಕ-ಪಕ್ಕ ಅಂರ್ತಜಲ ಮರು ಪೂರಣ ಘಟಕ ಸ್ಥಾಪಿಸಿಕೊಳ್ಳಬೇಕು. ಮುಖ್ಯವಾಗಿ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕೆರೆ, ಬಾವಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಇದೀಗ ನೀರಿನ ಅಭಾವ ಇಲ್ಲದಿದ್ದರೂ ಮುಂದೊಂದು ನೀರಿನ ಸಮಸ್ಯೆ ಉದ್ಬವಿಸಬಹುದು. ಅದಕ್ಕಾಗಿ ಮಳೆ ನೀರು ಕೊಯ್ಲು ಪರಿಣಾಮಕಾರಿ ವಿಧಾನವಾಗಿದೆ. ನೀರಿನ ಮಹತ್ವ ಅರಿಯುವುದಕ್ಕಾಗಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಪ್ರಪಂಚದಾದ್ಯಂತ ಇಂದು ವಿಶ್ವಜಲ ದಿನ ಆಚರಿಸಲಾಗುತ್ತಿದೆ ಎಂದ ಅವರು, ಪ್ರತಿಯೊಂದು ಜೀವಿಗೂ ನೀರು ಜೀವ ಜಲವಾಗಿದೆ. ಇದೀಗ ಕೈಗಾರಿಕರಣ, ನಗರೀಕರಣಗಳಿಂದಾಗಿ ನೀರು ಮಲಿನಗೊಳ್ಳುತ್ತಿದೆ. ಈ ದಿಸೆಯಲ್ಲಿ ನಾಗರೀಕರು ಜಲ ಜಾಗೃತಿಯ ಬಗ್ಗೆ ಗಮನ ಹರಿಸಬೇಕು. ಜಲ ಸಂರಕ್ಷಣೆಯನ್ನು ಕರ್ತವ್ಯ ಎಂಬಂತೆ ನಿರ್ವಹಿಸಬೇಕು. ನೀರಿನ ಮಿತ ಬಳಕೆ ಹಾಗೂ ರಕ್ಷಣೆಯಿಂದ ಮಾತ್ರ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ ಎಂದವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ಅವರು ಮಾತನಾಡಿ, 1993 ರಿಂದ ವಿಶ್ವಜನದಿನ ಆಚರಿಸುವ ಮೂಲಕ ನಾಗರೀಕರಲ್ಲಿ ಜಲ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ನಾಶ ಹಾಗೂ ಮಾಲಿನ್ಯಗಳಿಂದಾಗಿ ನೀರಿನ ಗುಣಮಟ್ಟ ಕುಸಿಯುತ್ತಿದೆ, ನೀರು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಎಲ್ಲರಲ್ಲೂ ಅರಿವು ಮೂಡಬೇಕು. ಅರಣ್ಯ ಉಳಿವಿನಿಂದ ಹೆಚ್ಚು ಮಳೆಯಾಗುವುದರೊಂದಿಗೆ ಅಂರ್ತಜಲ ಮಟ್ಟವೂ ಹೆಚ್ಚಾಗುತ್ತದೆ ಎಂದರು.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 800ಕ್ಕೂ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಜಿಲ್ಲಾಡಳಿತ ಕೈಗೊಂಡಿರುವುದು ಸ್ವಾಗತಾರ್ಹ, ರಾಜ್ಯದಲ್ಲೇ ಇದೊಂದು ಕ್ರಾಂತಿಕಾರಿ ನಡೆ ಎಂದು ಅವರು ಸಂತಸ ವ್ಯಕ್ತ ಪಡಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಸ್ವಚ್ಚ ಭಾರತ್ ಮಿಷನ್‍ನ ನೋಡಲ್ ಅಧಿಕಾರಿ ಕೆ. ಆನಂದ್ ಕುಮಾರ್, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಿ. ನರೇಂದ್ರ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸಂಧ್ಯಾ ಕೆ.ಎಸ್., ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೇಣುಗೋಪಾಲ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.