ಲಸಿಕೆ ನೀಡುವುದರಿಂದ ಮಕ್ಕಳಿಗೆ ಕೋವಿಡ್ನಿಂದ ಸಂಪೂರ್ಣ ಸುರಕ್ಷೆ : ಕೂರ್ಮಾರಾವ್
ಉಡುಪಿ, ಮಾ 16, 2022: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಇಂದಿನಿಂದ 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಕೋರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತಿದ್ದು, ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಇದನ್ನು ಮುಂಜಾಗ್ರತೆಯಾಗಿ ಎಲ್ಲಾ ರೀತಿಯಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಖಾತ್ರಿಯಾಗಿರುವುದರಿಂದ, ಜಿಲ್ಲೆಯ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆ ಕೊಡಿಸುವ ಮೂಲಕ ಮಕ್ಕಳನ್ನು ಕೋವಿಡ್ನಿಂದ ಸಂಪೂರ್ಣ ಸುರಕ್ಷೆ ಒದಗಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಅಜ್ಜರಕಾಡುವಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ, 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ಕೊಡಿಸಲು ಎಲ್ಲಾ ಪೋಷಕರು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಮಕ್ಕಳ ಪೋಷಕರ ಸಭೆಗಳನ್ನು ನಡೆಸಿ, ಅಗತ್ಯ ಮಾಹಿತಿ ನೀಡುವಂತೆ ಎಲ್ಲಾ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. 2008 ರಿಂದ 2010 ರ ಮಾರ್ಚ್ 15 ರೊಳಗೆ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಮೊದಲ ಡೋಸ್ ಪಡೆದ 28 ದಿನಗಳ ನಂತರ 2 ನೇ ಡೋಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ನೀಡುವಲ್ಲಿ 100% ಸಾಧನೆ ಆಗಿದ್ದು, 12 ರಿಂದ 14 ವರ್ಷದವರೆಗಿನ ಮಕ್ಕಳ ಲಸಿಕೆ ನೀಡುವಲ್ಲಿ ಸಹ 100% ಸಾಧನೆ ಮಾಡಲು ಹಾಗೂ ಉಡುಪಿ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಯುಷ್ ಆಸ್ಪತ್ರೆಯ ವೈದ್ಯ ಡಾ.ದಿನಕರ ಡೋಂಗ್ರೆ, ಜಿಲ್ಲಾಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ ಅಡಿಗ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ಅವರ ನಿರ್ದೇಶನದ ಗೋ ಕೊರೋನಾ ವೀಡಿಯೋ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.