ಎ.ಪಿ.ಎಂ.ಸಿ: ಮತದಾರರ ಪಟ್ಟಿ ಪರಿಷ್ಕರಣೆ

ಕಾರವಾರ ಮಾ. 3, 2022: ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಅಧಿಕಾರಾವಧಿಯು 2022ನೇ ಸಾಲಿನಲ್ಲಿ ಮುಕ್ತಾಯಗೊಳ್ಳುತ್ತಿರುವುದರಿಂದ ಚುನಾವಣೆ ನಡೆಸುವದಕ್ಕಾ ಎಲ್ಲ ಮತದಾರರ ಪಟ್ಟಿಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದೆ.
2022 ರ ಜನೇವರಿ 1 ರ ಅರ್ಹತಾ ದಿನಾಂಕದನ್ವಯ ಮಾ. 7ರಿಂದ ಕರಡು ಮತದಾರರ ಪಟ್ಟಿಯ ಮುದ್ರಣ ಹಾಗೂ ಪ್ರಕಟಣೆ ಮಾಡಲಾಗುವುದು. ಕೃಷಿಕ ಮತದಾರರು ಮಾ.21ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಮಾ 22ರಿಂದ 28ರವರೆಗೆ ಮತದಾರರ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಮಾ. 31 ಗುರುವಾರದಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಪ್ರತಿಯೊಬ್ಬ ಕೃಷಿಕ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡಿಸಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.