ಸಾಂಬಾರು ಬೆಳೆ ಪಾರ್ಕ್: ಡಿ.ಪಿ.ಆರ್ ತಯಾರಿಸಲು ಡಿ.ಸಿ ಸೂಚನೆ
ಚಿಕ್ಕಮಗಳೂರು ಫೆ.04, 2022: ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಸಮಿತಿ ಸಭೆ (ಪಿ.ಎಂ.ಇ.ಜಿ.ಪಿ) ಹಾಗೂ ಕೈಗಾರಿಕಾ ಸ್ಪಂದನ ಸಭೆಯು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಸಂಬಂಧ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ದಿಸೆಯಲ್ಲಿ ಕಡೂರು ತಾಲ್ಲೂಕಿನ ನಗದಿಯಾತ್ ಕಾವಲಿನಲ್ಲಿ ಟೆಂಡರ್ ಕರೆಯಲಾಗಿರುವ 236.38 ಎಕರೆ ಪ್ರದೇಶದಲ್ಲಿ ರೂ. 33.66 ಕೋಟಿಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸೆಪ್ಟೆಂಬರ್ 2022 ರ ಒಳಗೆ ಹಸ್ತಾಂತರಿಸಲು ಕೆಐಇಡಿಬಿಗೆ ಸೂಚಿಸಿದರು. ಅಂಬಳೆ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿ ಸಾಂಬಾರು ಬೆಳೆ ಉತ್ಪನ್ನಗಳ ಪಾರ್ಕ್ ನಿರ್ಮಾಣ ಹಾಗೂ ಅಭಿವೃದ್ಧಿಗೆ 10 ಎಕರೆ ಜಮೀನು ಹಂಚಿಕೆಯಾಗಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೊಪ್ಪ ತಾಲ್ಲೂಕು ಹರಿಹರಪುರದ ಎಡದಂಟೆ ಗ್ರಾಮದಲ್ಲಿ ಕೆಎಸ್ಎಸ್ಐಡಿಯಿಂದ 7.2 ಎಕರೆ ಪ್ರದೇಶಾಭಿವೃದ್ಧಿ ಪಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುಂತೆ ಶೆಡ್ಡು/ಪ್ಲಾಟುಗಳನ್ನು ನಿರ್ಮಿಸಲು ಅವಶ್ಯವಿರುವ ಮರಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.
ಪಿ.ಎಂ.ಇ.ಜಿ.ಪಿ ಅಡಿಯಲ್ಲಿ ಬ್ಯಾಂಕುಗಳು ಅರ್ಹ ಫಲಾನುಭವಿಗಳಿಗೆ ಸಾಲವನ್ನು ಕಾಲಮಿತಿಯಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಲು ಸೂಚಿಸಿದರು.
ಕೈಗಾರಿಕಾ ಸ್ಪಂದನ ಸಭೆಯಲ್ಲಿ ಚಿಕ್ಕಮಗಳೂರು ಕೈಗಾರಿಕಾ ವಸಾಹತುವಿನಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ವ್ಯವಸ್ಥೆ ಹಾಗೂ ಸ್ವೀಕರಿಸಿದ ಅಹವಾಲುಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು, ಉಪ ನಿರ್ದೇಶಕ ಕೆ.ಎಸ್. ರವಿಪ್ರಸಾದ್, ಸಹಾಯಕ ನಿರ್ದೇಶಕ ಚಂದ್ರಶೇಖರ, ಚಿಕ್ಕಮಗಳೂರು ತಹಶೀಲ್ದಾರ್ ಕಾಂತರಾಜು, ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಎಂ.ಆರ್.ಮಹೇಶ್, ಜಿಲ್ಲಾ ಮುನ್ನಡೆ ಬ್ಯಾಂಕ್ ವ್ಯವಸ್ಥಾಪಕ ಸುರೇಶ್, ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಶ್ರೀಧರ್, ಬೀರೂರು ಸಣ್ಣ ಕೈಗಾರಿಕಾ ಅಧ್ಯಕ್ಷ ಈರಣ್ಣ ಗೌಡ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.